ಸುದ್ದಿ ಸಂಗ್ರಹ ಶಹಾಬಾದ್
ಬಿಸಿಯೂಟದಲ್ಲಿ ಅವಧಿ ಮುಗಿದ ಅಡುಗೆ ಎಣ್ಣೆ ಬಳಸಿದ ಪರಿಣಾಮ ಶಹಾಬಾದ್ ಸರಕಾರಿ ಬಾಲಕರ ಪ್ರೌಢ ಶಾಲೆ ಮತ್ತು ಉರ್ದು ಶಾಲಾ ಮಕ್ಕಳಿಗೆ ಊಟ ಸರಬರಾಜು ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಆಹಾರ ಸೇವಿಸಿದ ವಿದ್ಯಾರ್ಥಿಗಳು ದುರಂತದಿಂದ ಪಾರಾಗಿದ್ದಾರೆ, ಆದರೆ ಈ ಬಗ್ಗೆ ಶಾಲಾ ಆಡಳಿತವು ನಿರ್ಲಕ್ಷ್ಯ ತೋರಿರುವುದು ಗಂಭೀರ ವಿಷಯವಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಶಹಬಾದ್ ಸರ್ಕಾರಿ ಬಾಲಕರ ಪ್ರೌಢ ಶಾಲೆ ಮತ್ತು ಉರ್ದು ಶಾಲೆಗೆ ಪತ್ರಕರ್ತರು ಭೇಟಿ ನೀಡಿದಾಗ ಈ ಸತ್ಯ ತಿಳಿದು ಬಂದಿದೆ. ಸರಬರಾಜುದಾರರ ಕೋಡ್ U32625 ಬ್ಯಾಚ್ ನಂಬರ್ 09 ಇರುವ ಅಡುಗೆ ಎಣ್ಣೆಯನ್ನು ಬಿಸಿಯೂಟಕ್ಕೆ ಬಳಸಿ ಇಟ್ಟಿರುವ ಕವರ್ ಮೇಲೆ 2/6/2026ಕ್ಕೆ ಅವಧಿ ಮುಗಿದಿದೆ ಎಂದು ಗೊತ್ತಿದ್ದರೂ ಯಾರ ಗಮನಕ್ಕೂ ಬಾರದಂತೆ ಎಣ್ಣೆ ಬಳಸುತ್ತಿರುವುದು ಕಂಡುಬಂದಿದೆ.

ಒಂದೂವರೆ ತಿಂಗಳು ಹಿಂದೆ ಅವಧಿ ಮುಗಿದ ಎಣ್ಣೆ ಬಳಸಿ ಅಡುಗೆ ಮಾಡಿ ಸರಬರಾಜು ಮಾಡಿರುವ ಬಗ್ಗೆ ಪ್ರಶ್ನಿಸಿದ ಪತ್ರಕರ್ತರಿಗೆ ಮತ್ತು ಸ್ಥಳೀಯರಿಗೆ ನಾನು ನೋಡಿಲ್ಲ ತಪ್ಪಾಗಿದೆ ಕ್ಷಮಿಸಿ ಎಂದು ಶಾಲೆಯ ಮುಖ್ಯ ಶಿಕ್ಷಕ ಏಮನಾಥ ರಾಠೋಡ ಉತ್ತರಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
ಕಲಬುರಗಿ ಜಿಲ್ಲೆಯ ದಂಡೋತಿ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ ವಿದ್ಯಾರ್ಥಿಗಳು ಅನುಭವಿಸಿದ ತೊಂದರೆಗಳು ಗೊತ್ತಿದ್ದರೂ ಸಂಬಂಧಿಸಿದವರು ಬೇಜವಾಬ್ದಾರಿ ತೋರಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಅಡುಗೆ ತಯಾರಿಸುವ ಸಿಬ್ಬಂದಿ, ಮೇಲ್ವಿಚಾರಕ ಮತ್ತು ಆಡಳಿತ ಮಂಡಳಿ ಆಹಾರ ಪದಾರ್ಥಗಳ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸುವಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಸ್ಥಳೀಯರು ಮತ್ತು ದಲಿತ ಸೇನೆಯ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಶಾಲೆಯ ಮುಖ್ಯ ಗುರುಗಳು ಮತ್ತು ಮೇಲ್ವಿಚಾರಕರು ಮಕ್ಕಳಿಗೆ ಅವಧಿ ಮುಗಿದ ಎಣ್ಣೆ ಬಳಸಿ ಊಟ ಮಾಡಿಸುತ್ತಿದ್ದಾರೆ, ಬಹುತೇಕ ಶಾಲೆಗಳಲ್ಲಿ ಇದೆ ಪರಿಸ್ಥಿತಿ ಇದೆ. ಮಕ್ಕಳ ಜೀವದ ಜೊತೆ ಆಟವಾಡುತ್ತಿರುವ ಶಿಕ್ಷಕರನ್ನು ಯಾವುದೆ ಮುಲಾಜಿ ಇಲ್ಲದೆ ವಜಾಗೊಳಿಸಬೇಕು ಎಂದು ದಲಿತ ಸೇನೆಯ ಮುಖಂಡರು ಮತ್ತು ಹಲವು ಜನರು ಒತ್ತಾಯಿಸಿದ್ದಾರೆ.