ರಾವೂರ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಅಣಕು ಚುನಾವಣೆ: ಶೇ.92 ರಷ್ಟು ಮತದಾನ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಶಹಾಬಾದ್
ಪ್ರಜಾಪ್ರಭುತ್ವದ ನಿಜವಾದ ಆಶಯ ಈಡೇರುವುದು ಉತ್ತಮ ನಾಯಕರ ಆಯ್ಕೆ ಪಾರದರ್ಶಕ ಚುನಾವಣೆ ಅವಲಂಬಿಸಿದೆ ಎಂದು ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕ ಅಧ್ಯಕ್ಷ ಕೆ ರಮೇಶ ಭಟ್ ಹೇಳಿದರು.

ತಾಲೂಕಿನ ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಚುನಾವಣೆ ಸಾಕ್ಷರತಾ ಕ್ಲಬ್ ವತಿಯಿಂದ ತರಗತಿ ನಾಯಕತ್ವಕ್ಕಾಗಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ವಿಜೇತ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ಆಮಿಷದ ಮತದಾನ ಪ್ರಜಾಪ್ರಭುತ್ವದ ಆಶಯಗಳನ್ನು ಹಾಳುಮಾಡುತ್ತವೆ. ಆದ್ದರಿಂದ ಯಾವುದೆ ಚುನಾವಣೆಯಲ್ಲಿ ಯಾವುದೆ ಆಸೆ- ಆಮಿಷಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ಮತ ಚಲಾಯಿಸಿ ಉತ್ತಮ ನಾಯಕರ ಆಯ್ಕೆ ಮಾಡಿ ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣ ಮಾಡುವಲ್ಲಿ ನಮ್ಮ ನಿಮ್ಮೆಲ್ಲರ ಪಾತ್ರ ಬಹಳ ಮುಖ್ಯ ಎಂದರು.

ಸಂಸ್ಥೆಯ ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯ, ನಾಯಕತ್ವದ ಗುಣ, ಜವಾಬ್ದಾರಿಯುತ ನಾಗರಿಕ ಪ್ರಜ್ಞೆ ಮತ್ತು ಸಂಘಟನಾ ಕೌಶಲ ಬೆಳೆಸುವ ಉದ್ದೇಶದಿಂದ ಚುನಾವಣಾ ಪ್ರಕ್ರಿಯೆ ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು ಎಂದರು.

ಚುನಾವಣೆಯ ಪ್ರತಿಯೊಂದು ಹಂತ ಬಹಳ ಅಚ್ಚುಕಟ್ಟಾಗಿ ಮಾಡುವುದರ ಮೂಲಕ ಚುನಾವಣೆಯ ಅರಿವು ಮೂಡಿಸುವ ಪ್ರಯತ್ನ ಶ್ಲಾಘನೀಯ ಎಂದರು.

ಈ ಹಂತದಲ್ಲಿ ಉತ್ತಮ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು, ಉತ್ತಮ ರಾಷ್ಟ್ರ ನಿರ್ಮಾಣ ಉತ್ತಮ ನಾಯಕತ್ವವನ್ನು ಅವಲಂಬಿಸಿದೆ ಎಂದರು.

ಅತ್ಯಂತ ಉತ್ಸಾಹದಿಂದ ಮಕ್ಕಳು ಸರತಿ ಸಾಲಿನಲ್ಲಿ ನಿಂತು ಗುರುತಿನ ಚೀಟಿಯೊಂದಿಗೆ ಮತ ಚಲಾಯಿಸಿದರು. ಎನ್‌ಸಿಸಿ ಕೆಡೆಟ್‌ಗಳು ಪ್ರತಿ ಬೂತ್ ನಲ್ಲಿ ಶಿಸ್ತು ಮತ್ತು ರಕ್ಷಣಾ ವ್ಯವಸ್ಥೆ ಮಾಡಿದರು.‌‌

ನಾಮಪತ್ರ ಸಲ್ಲಿಕೆಯಿಂದ ಚುನಾವಣಾ ಪ್ರಚಾರ, ಮತದಾನ, ಮತ ಎಣಿಕೆ, ಫಲಿತಾಂಶ ಘೋಷಣೆ, ಪ್ರಮಾಣ ವಚನ ಸ್ವೀಕಾರ ಮತ್ತು ಪ್ರಮಾಣ ಪತ್ರ ವಿತರಣೆ ಸೇರಿದಂತೆ ಎಲ್ಲವನ್ನೂ ಚುನಾವಣೆ ಸಾಕ್ಷರತಾ ಕ್ಲಬ್’ನ ಸಂಯೋಜಕ ಸಿದ್ದಲಿಂಗ ಬಾಳಿ ತುಂಬಾ ಅಚ್ಚುಕಟ್ಟಾಗಿ ನಿರ್ಹಹಿಸಿ ಸೈ ಎನಿಸಿಕೊಂಡರು. ಒಟ್ಟು 410 ಮತದಾರರಲ್ಲಿ 378 ಮತದಾರರು ಮತ ಚಲಾವಣೆ ಮಾಡಿದರು 92 ಪ್ರತಿಶತ ಮತದಾನವಾಯಿತು.

ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರು
10ನೇ ತರಗತಿಯ ಭಾಗ್ಯಶ್ರೀ, ಅನ್ನಪೂರ್ಣ, ಸಹಾನಾ, ಶ್ರೀಮಂತ, ಬಸವರಾಜ. 9ನೇ ತರಗತಿಯ ಪೃಥ್ವಿರಾಜ, ಸಾಕ್ಷೀ, ರೋಷನ್, ಲಕ್ಷ್ಮಿ ಮತ್ತು 8ನೇ ತರಗತಿಯ ಯಲ್ಲಪ್ಪ, ಭೂಮಿಕಾ, ಅಖಿಲೇಶ್, ಭಾಗ್ಯಶ್ರೀ.

ಸಿದ್ದಲಿಂಗ ಬಾಳಿ (ELC ಸಂಯೋಜಕರು): ಮಕ್ಕಳಲ್ಲಿ ಚುನಾವಣೆ ಅರಿವು ಮೂಡಿಸಲು ನಡೆಸಿದ ಚುನಾವಣೆಯ ಎಲ್ಲಾ ಪ್ರಕ್ರಿಯೆಗಳು ಅತ್ಯಂತ ಯಶಸ್ವಿಯಾಗಿ ನಡೆದವು. ಆಡಳಿತ ಮಂಡಳಿಯ ಸಹಕಾರ, ಶಿಕ್ಷಕರ ಸಹಭಾಗಿತ್ವದಿಂದ ಯಶಸ್ವಿಯಾಯಿತು. ಮಕ್ಕಳು ಇಡಿ ಚುನಾವಣೆ ಪ್ರಕ್ರಿಯೆಯಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು.‌‌

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ವಿದ್ಯಾಧರ ಖoಡಾಳ ಸೇರಿದಂತೆ ಸಿಬ್ಬಂದಿ ಬಳಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *