ಸುದ್ದಿ ಸಂಗ್ರಹ ಕಾಳಗಿ
ತಾಲೂಕಿನ ಮಂಗಲಗಿ ಗ್ರಾಮದಲ್ಲಿ ಮಂಗಳವಾರ ಬಸವ ಅಭಿಮಾನಿಗಳ ವತಿಯಿಂದ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವೇಶ್ವರರ ಅಶ್ವಾರೂಢ ಮೂರ್ತಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ಈ ವೇಳೆ ಮಾಜಿ ಸಂಸದ ಡಾ.ಉಮೇಶ ಜಾಧವ ಮಾತನಾಡಿ, 12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ಅನುಭವ ಮಂಟಪ ಅಸ್ತಿತ್ವಕ್ಕೆ ತರುವ ಮೂಲಕ ಜಗತ್ತಿಗೆ ಮೊಟ್ಟಮೊದಲ ಸಂಸತ್ತು, ಪ್ರಜಾಪ್ರಭುತ್ವ ಪರಿಚಯಿಸಿದವರೇ ಬಸವಣ್ಣನವರು. ಅವರ ಸಮಾನತೆಯ ಸಂಸ್ಕೃತಿ ಮಂಗಲಗಿ ಗ್ರಾಮದಲ್ಲಿ ಮೇಳೈಸಿದೆ ಎಂದರು.
ಬಸವಕಲ್ಯಾಣ ಅನುಭವ ಮಂಟಪದ ಅಭಿವೃದ್ಧಿಗೆ ಹಿಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ 500 ಕೋಟಿ ರೂ ಅನುದಾನ ನೀಡಿದ್ದರು. ಪ್ರತಿಯೊಬ್ಬರು ಬಸವಣ್ಣನವರ ವಚನ, ಆದರ್ಶಗಳನ್ನು ಪಾಲಿಸಿ ಶರಣ ಸಂಸ್ಕೃತಿ ಉಳಿಸಿ ಬೆಳೆಸಬೇಕು ಎಂದು ಜಾಧವ ಕರೆ ನೀಡಿದರು.
ಇಲ್ಲಿ ಬಸವೇಶ್ವರರ ಅಶ್ವಾರೂಢ ಮೂರ್ತಿಯನ್ನು ಲೋಕಾರ್ಪಣೆಗೊಳಿಸಬೇಕು ಎಂಬ ನಮ್ಮೆಲ್ಲರ ಬಯಕೆ ಇಂದು ಈಡೇರಿದೆ ಎಂದು ಸ್ಮರಿಸಿದರು.
ಆಳಂದದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಈ ನೆಲಮೂಲದ ಸಮಸ್ತ ಜನರನ್ನು ಕರೆದುಕೊಂಡು ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿವರ್ಣ, ಜಾತಿವ್ಯವಸ್ಥೆಯ ತುಳಿತಕ್ಕೆ ಒಳಗಾದವರನ್ನು ಮೇಲೆತ್ತಿದ್ದಾರೆ. ಅನುಭವ ಮಂಟಪದ ಮೂಲಕ 770 ಶರಣರನ್ನು ಸಂಸದರನ್ನಾಗಿಸಿ ಎಲ್ಲರಿಗೂ ಎಲ್ಲ ರೀತಿಯ ಸ್ವಾತಂತ್ರ್ಯವನ್ನು ಕೊಡಿಸಿದ ಕೀರ್ತಿ ಬಸವೇಶ್ವರರಿಗೆ ಸಲ್ಲುತ್ತದೆ ಎಂದರು.
ಸಾಹಿತಿ ಡಾ.ನಿಲಾಂಬಿಕಾ ಪೊಲೀಸ್ ಪಾಟೀಲ ಮಾತನಾಡಿ, ಮಂಗಲಗಿ ಗ್ರಾಮದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಸ್ವಾಗತರ್ಹ. ಇನ್ಮುಂದೆ ಇಲ್ಲಿ ಪ್ರತಿವಾರ ಶರಣ ಚಿಂತನೆ, ಅನುಭಾವ, ವಚನಗಾಯನ ನಡೆಯಬೇಕು. ಈ ದಿಸೆಯಲ್ಲಿ ಗ್ರಾಮಸ್ಥರು ಕಾರ್ಯಪ್ರವೃತರಾಗಬೇಕು’ ಎಂದರು.
ಭರತನೂರಿನ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಬಸವಕಲ್ಯಾಣದ ಬಸವಪ್ರಭು ಸ್ವಾಮೀಜಿ ಮಾತನಾಡಿದರು.
ಶಾಂತೇಶ್ವರ ಮಠದ ಪೂಜ್ಯ ಡಾ.ಶಾಂತಸೋಮನಾಥ ಶಿವಾಚಾರ್ಯರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.
ಸೇಡಂನ ಸದಾಶಿವ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ಜಿ ಶೆಟಗಾರ, ರಾಜ್ಯ ಸಂಚಾಲಕ ರವೀಂದ್ರ ಶಾಬಾದಿ ವೇದಿಕೆಯಲ್ಲಿದ್ದರು.
ಮಂಗಲಗಿ ಮುಖಂಡ ಸಂತೋಷ ಪಾಟೀಲ ಅಧ್ಯಕ್ಷತೆವಹಿಸಿದ್ದರು. ಗ್ರಾ.ಪಂ ಮಾಜಿ ಅಧ್ಯಕ್ಷ ನಿಂಬೆಣ್ಣಪ್ಪ ಕೋರವಾರ ಪ್ರಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಧೂಳಾಗುಂಡಿ ನಿರೂಪಿಸಿ, ಸಂಗಣ್ಣ ಧೂಳಾಗುಂಡಿ ಸ್ವಾಗತಿಸಿದರು. ಕಲಾವಿದೆ ವಿಜಯಲಕ್ಷ್ಮೀ ಕೆಂಗನಾಳ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಶರಣಗೌಡ ಪಾಟೀಲ, ಶಿವಶರಣಪ್ಪ ಕಮಲಾಪುರ, ಮಲ್ಲಿನಾಥ ಕೋಲಕುಂದಿ, ಬಿಇಒ ಸಿದ್ದವೀರಯ್ಯ ರುದ್ನೂರ, ಮಲ್ಲಿನಾಥ ಪಾಟೀಲ, ಶೇಖರ ಪಾಟೀಲ, ರಮೇಶ ಕಿಟ್ಟದ, ಪ್ರಶಾಂತ ಕದಂ, ಜಗನ್ನಾಥ ತೇಲಿ, ನೀಲಕಂಠ ಮಡಿವಾಳ, ಶರಣು ಚಂದಾ, ರೇವಣಸಿದ್ದಯ್ಯ ಮಠ ಇದ್ದರು.