ಕಲಬುರಗಿ: ರಾಷ್ಟ್ರದ ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಗೆ ನಿಖರವಾದ ಮಾಹಿತಿಯನ್ನು ನೀಡುವ ಮೂಲಕ ಅವುಗಳಿಗೆ ಪರಿಹಾರ ದೊರಕಿಸಿಕೊಡುವಲ್ಲಿ ಅಂಕಿ-ಅಂಶಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿವೆ ಎಂದು ಗುವಿವಿ ಅರ್ಥಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಎಚ್ ಅಭಿಮತಪಟ್ಟರು.
ಜಿಲ್ಲೆಯ ಅಫಜಲಪುರ ತಾಲೂಕಿನ ಚಿನ್ಮಯಗಿರಿಯ ಮಹಾಂತೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರವಿವಾರ ಏರ್ಪಡಿಸಿದ್ದ ‘ವಿಶ್ವ ಸಂಖ್ಯಾಶಾಸ್ತ್ರ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಸಂಖ್ಯಾಶಾಸ್ತ್ರವು ರಾಷ್ಟ್ರದ ಸಂಪನ್ಮೂಲಗಳ ಸದ್ಬಳಕೆಯ ಬಗ್ಗೆ ವಿವರಣೆ ನೀಡುತ್ತದೆ. ಯುವಕರು ಸಂಖ್ಯಾಶಾಸ್ತ್ರದ ಬಗ್ಗೆ ಕುತೂಹಲದಿಂದ ಹೆಚ್ಚಿನ ಅಧ್ಯಯನ ಮಾಡಿದರೆ, ರಾಷ್ಟ್ರದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಬಹುದಾಗಿದೆ ಎಂದರು.
ಬಳಗದ ಅಧ್ಯಕ್ಷ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ್ ಮಾತನಾಡಿ, ನಮ್ಮ ದೇಶದ ಪ್ರಸಿದ್ದ ಸಂಖ್ಯಾಶಾಸ್ತ್ರಜ್ಞ ಪ್ರೊ.ಪಿ.ಸಿ ಮಹಲ್‌ನೊಬಿಸ್ ಅವರು ಸಂಖ್ಯಾಶಾಸ್ತ್ರ ಕ್ಷೇತ್ರಕ್ಕೆ ಅದ್ವಿತೀಯ ಕೊಡುಗೆ ನೀಡಿದ್ದಾರೆ. ದ್ವಿತೀಯ ಪಂಚವಾರ್ಷಿಕ ಯೋಜನೆಗೆ ಸೂಕ್ತ ಮಾರ್ಗದರ್ಶನ ನೀಡಿ ಯಶಸ್ವಿಗೊಳಿಸಿದ್ದಾರೆ. ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯನ್ನು ಸ್ಥಾಪಿಸಿ, ಅದರ ಮೂಲಕ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕೃಷಿ, ಕೈಗಾರಿಕೆ, ಸೇವಾ ಕ್ಷೇತ್ರ ಸಂಬಂಧಿಸಿದಂತೆ ಅನೇಕ ಅಂಕಿ-ಅಂಶಗಳನ್ನು ಸಂಗ್ರಹಿಸಿ ಆರ್ಥಿಕ ಸಮಸ್ಯೆಗೆ ಪರಿಹಾರವನ್ನು ಸೂಚಿಸಿದ್ದಾರೆ. ಅವರ ಸ್ಮರಣೆಗಾಗಿ ಈ ದಿನವನ್ನು ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ದಯಾನಂದ ಬಂದರವಾಡ, ಉಪನ್ಯಾಸಕರಾದ ಲಕ್ಷ್ಮಿಕಾಂತ ಹಿರೇಗೌಡ, ವೀರಣ್ಣ ಡಿ.ಪಟ್ಟಣ, ಸುರೇಶ ರಾಠೋಡ, ರಾಜೇಂದ್ರ ನಾಟಿಕಾರ, ಮಹಾಂತೇಶ ಪಾಟೀಲ್, ಜಗದೇಶ್ವರಿ ವಾಡೇದ್, ಅಜೀತಕುಮಾರ ಬಕರೆ ಮತ್ತು ವಿದ್ಯಾರ್ಥಿಗಳು ಇದ್ದರು.