ಗೃಹ‌ ಸಚಿವ‌ರಾದ ಬಳಿಕ ಕಲಬುರಗಿಗೆ ಭೇಟಿ: ಪ್ರಿಯಾಂಕ್‌ ಖರ್ಗೆಗೆ ಅದ್ದೂರಿ ಸ್ವಾಗತ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ರಾಜ್ಯದ ಗೃಹ ಸಚಿವರಾದ ಬಳಿಕ‌ ಇದೆ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ‌ ಸಚಿವ ‌ಪ್ರಿಯಾಂಕ್ ಖರ್ಗೆ ಅವರನ್ನು ‌ಕಾಂಗ್ರೆಸ್ ಪಕ್ಷದ ನಾಯಕರು, ಮುಖಂಡರು ಮತ್ತು ಅಭಿಮಾನಿಗಳು ‌ಅದ್ದೂರಿಯಾಗಿ ಭರಮಾಡಿಕೊಂಡರು.

ನಗರದ ನೆಹರೂ ಗಂಜ್ ಪ್ರದೇಶದ ನಗರೇಶ್ವರ ಶಾಲೆಯ ಎದುರು ಬಂದಿಳಿದ ಕಲಬುರಗಿ, ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಪ್ರಿಯಾಂಕ್ ಖರ್ಗೆ ಅವರನ್ನು ಮೊದಲಿಗೆ ತೆರೆದ ಕಾರಿನಲ್ಲಿ, ನಂತರ ಸಿಂಗರಿಸಿದ ಲಾರಿಯ ಮೇಲೆ ಏರಿಸಿ‌ ಮೆರವಣಿಗೆ ಮಾಡಲಾಯಿತು. ಬಗೆಬಗೆಯ ಪುಷ್ಪಗಳ ವೃಷ್ಟಿಗೈದು ಸಂಭ್ರಮಿಸಿದರು.

ದಾರಿಯುದ್ದಕ್ಕೂ ಜನರತ್ತ ಕೈ ಬೀಸಿ, ಕೈ‌ಮುಗಿದು ಸಚಿವ ಪ್ರಿಯಾಂಕ್ ಖರ್ಗೆ ನಮಿಸುತ್ತಿದ್ದ ದೃಶ್ಯ ‌ಕಂಡು ಬಂತು.

ನಗರೇಶ್ವರ ಶಾಲೆಯಿಂದ ಆರಂಭವಾದ ಮೆರವಣಿಗೆಯು ಚೌಕ ವೃತ್ತ, ಸೂಪರ್ ಮಾರ್ಕೆಟ್, ಜಗತ್ ವೃತ್ತ ಮೂಲಕ‌ ಜಿಲ್ಲಾ ಕಾಂಗ್ರೆಸ್ ಕಚೇರಿ ತನಕ ನಡೆಯಿತು. ಹಲಗೆ ವಾದನ, ಬ್ಯಾಂಜೋ‌ ವಾದನಗಳ ಸದ್ದು ನೆರೆದಿದ್ದವರು ಹುಚ್ಚೆದ್ದು ಕುಣಿಯುವಂತೆ‌ ಮಾಡಿತು. ಕಾಂಗ್ರೆಸ್ ಪಕ್ಷದ‌ ಬಾವುಟಗಳು ರಾರಾಜಿಸಿದವು.

ಮೆರವಣಿಗೆ ಬರುವ ಹಾದಿಯ ಅಲ್ಲಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರು ಚೀಲಗಟ್ಟಲೆ ಹೂವಿನ ಪಕಳೆ ಎರಚಿ, ಬೃಹತ್‌ ಕ್ರೇನ್ ಗಳ ಮೂಲಕ ಆಳೆತ್ತರದ ಕಟೌಟ್ ಪ್ರದರ್ಶಿಸಿ, ಪಟಾಕಿ ಸಿಡಿಸಿ ಸ್ವಾಗತಿಸಿದ್ದು‌ ವಿಶೇಷವಾಗಿತ್ತು.

ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಮೆರವಣಿಗೆಯಲ್ಲಿ ಶಾಸಕ‌ ಅಲ್ಲಮಪ್ರಭು ಪಾಟೀಲ, ವಿಧಾನ ‌ಪರಿಷತ್‌‌ ಸದಸ್ಯರೂ ಆಗಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ‌ ಹರವಾಳ, ಕುಡಾ ಅಧ್ಯಕ್ಷ ಮಜಹರ್‌ ಆಲಂ ಖಾನ್ ಸೇರಿದಂತೆ ಹಲವರು ಮೆರವಣಿಗೆಯಲ್ಲಿ ಸಾಥ್‌ ನೀಡಿದರು.

Leave a Reply

Your email address will not be published. Required fields are marked *