ಸುದ್ದಿ ಸಂಗ್ರಹ ಶಹಾಬಾದ್
ಸರಳ ಮತ್ತು ಸೌಮ್ಯ ಸ್ವಭಾವದ ಅಪರೂಪದ ಶಿಕ್ಷಕ ಎಂದರೆ ಶಿವಲಿಂಗಪ್ಪ ಹೆಬ್ಬಾಳಕರ್ ಎಂದು ತಹಸೀಲ್ದಾರ್ ನೀಲಪ್ರಭಾ ಬಬಲಾದ್ ಹೇಳಿದರು.
ನಗರದ ರಾಯಲ್ ಗಾರ್ಡನ್ ಕಲ್ಯಾಣ ಮಂಟಪದಲ್ಲಿ ಶನಿವಾರ ಗಿರಿಶಿರಿ ಸಾಂಸ್ಕೃತಿಕ ಕಲಾ ಸಂಸ್ಥೆ ಹಾಗೂ ಹೆಬ್ಬಾಳಕರ್ ಅವರ ಅಭಿಮಾನಿ ಬಳಗದ ವತಿಯಿಂದ ‘ಪ್ರಜ್ಞೆಶೀಲ ಅಭಿನಂದನಾ ಗ್ರಂಥ’ ಬಿಡುಗಡೆ ಹಾಗೂ ವಯೋನಿವೃತ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿವಲಿಂಗಪ್ಪ ಹೆಬ್ಬಾಳಕರ್ ಶಿಕ್ಷಣ ಇಲಾಖೆಯಲ್ಲಿ ಸುಮಾರು 36 ವರ್ಷಗಳ ಸೇವೆ ಸಲ್ಲಿಸಿ ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಇಂದು ಅವರ ಅನೇಕ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಶಂಷಿಸಿದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶಂಕರ ಡಾಂಗೆ ಅವರು ಶಿವಲಿಂಗಪ್ಪ ಹೆಬ್ಬಾಳಕರ್ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದರು.
ಪ್ರಾಧ್ಯಾಪಕ ಕರಿಘೋಳೇಶ್ವರ ಅವರು ನಿವೃತ್ತಿಯ ನಂತರದ ಕರ್ತವ್ಯ ಹಾಗೂ ಸಾಮಾಜಿಕ ಕೊಡುಗೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಅಣದೂರಿನ ಬಂತೆ ವರಜ್ಯೋತಿ ಥೇರೋ ವಹಿಸಿದ್ದರು. ಅಧ್ಯಕ್ಷತೆಯನ್ನು ಎಸ್.ಎಸ್ ಬನ್ನಿಕಟ್ಟಿ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ, ಸುರೇಶ ಮೆಂಗನ, ಮಲ್ಲಯ್ಯ ಗುತ್ತೆದಾರ ಮತ್ತು ವಿಜಯಕುಮಾರ ಹಂಚನಾಳ ಭಾಗವಹಿಸಿದ್ದರು.
ಶಿವಪುತ್ರ ಕರಣಿಕ, ಶರಣಬಸಪ್ಪ ಧನ್ನಾ, ಮನೀಷ ಜಾಜಿ ಮತ್ತು ನಿವೃತ್ತ ಮುಖ್ಯ ಶಿಕ್ಷಕ ಶಿವಲಿಂಗಪ್ಪ ಹೆಬ್ಬಾಳಕರ್ ದಂಪತಿಗಳು ಇದ್ದರು.