ಸುದ್ದಿ ಸಂಗ್ರಹ ನವದೆಹಲಿ
ಅಫ್ಘಾನಿಸ್ತಾನದ ಹಿಂದೂಕುಷ್ ಪ್ರದೇಶದಲ್ಲಿ ಇಂದು 6.2 ತೀವ್ರತೆಯ ಭೂಕಂಪ ಸಂಭವಿಸುದ್ದು, ದೆಹಲಿ, ಎನ್‌ಸಿಆರ್ ಹಾಗೂ ಜಮ್ಮು- ಕಾಶ್ಮೀರ ಪ್ರದೇಶಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಇದು ಜನರ ಆತಂಕಕ್ಕೂ ಕಾರಣವಾಗಿದೆ.
ಶನಿವಾರ ಸಂಜೆ 6:04 ರ ಸುಮಾರಿಗೆ ಹಿಂದೂಕುಷ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಮಾಹಿತಿ ಪ್ರಕಾರ, ಈಶಾನ್ಯ ಅಫ್ಘಾನಿಸ್ತಾನದ ಕಲಾಫ್ಗನ್‌ನಿಂದ ಸುಮಾರು 81 ಕಿಮೀ ದೂರದಲ್ಲಿ, 215 ಕಿಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ.
ಅಫ್ಘಾನ್‌ನಲ್ಲಿ ಭೂಕಂಪದಿಂದಾಗಿ ಪಾಕಿಸ್ತಾನ, ಉತ್ತರ ಭಾರತ, ಚೀನಾ, ತಜಿಕಿಸ್ತಾನ್, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್ ಮತ್ತು ತುರ್ಕಮೆನಿಸ್ತಾನ್ ಸೇರಿದಂತೆ ಹಲವಾರು ದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ದೆಹಲಿ-ಎನ್‌ಸಿಆರ್‌ನಲ್ಲಿ ಕೆಲ ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ.ಜಮ್ಮು ಮತ್ತು ಕಾಶ್ಮೀರದಲ್ಲೂ ಬಲವಾದ ಕಂಪನಗಳು ಕಂಡುಬಂದಿದ್ದು, ಜನ ಭಯಭೀತರಾಗಿ ಮನೆ, ಕಚೇರಿ ಬಿಟ್ಟು ಬೀದಿಗೆ ಓಡಿದ್ದಾರೆ. ತಕ್ಷಣಕ್ಕೆ ಸಾವು-ನೋವುಗಳು, ಆಸ್ತಿ-ಪಾಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ.
ಇದಕ್ಕೂ ಮುನ್ನ ಬೆಳಿಗ್ಗೆ 11:38ರ ಸುಮಾರಿಗೆ ಭಾರತದ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ 3.2 ತೀವ್ರತೆಯ ಭೂಕಂಪ ದಾಖಲಾಗಿತ್ತು.