ಸುದ್ದಿ ಸಂಗ್ರಹ ಕಾಳಗಿ
ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರ ನೇತೃತ್ವದಲ್ಲಿ ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಉದ್ದೇಶದಿಂದ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಯಿತು.
ಕಾರ್ಯಾಚರಣೆಯಲ್ಲಿ ಗಾಂಜಾ/ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟದಲ್ಲಿ ಈ ಹಿಂದೆ ಭಾಗಿಯಾಗಿದ್ದ ಆರೋಪಿತರ ಚಲನ-ವಲನಗಳ ಮೇಲೆ ನಿಗಾ ವಹಿಸುವ ದೃಷ್ಟಿಯಿಂದ, ತೆಲಂಗಾಣ ರಾಜ್ಯದಲ್ಲಿ ದಾಖಲಾಗಿರುವ ಗಾಂಜಾ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಾಡಬೂಳ ಠಾಣಾ ವ್ಯಾಪ್ತಿಯ ಆರೋಪಿತರ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪಿಎಸ್ಐಗಳಾದ ಗೌತಮ, ಸಿದ್ದಲಿಂಗ (ತನಿಖೆ), ಎಎಸ್ಐ ಗುಂಡಪ್ಪ, ಹೆಡ್ ಕಾನ್ಸ್ಟೇಬಲ್ ಗಳಾದ ವೀರಶೆಟ್ಟಿ, ವಿಜಯ ನಾರಾಯಣ ಮತ್ತು ಕಾನ್ಸ್ಟೇಬಲ್’ಗಳಾದ ರಮೇಶ, ಸಂಗಣ್ಣ ಗಪೂರ್, ಅರುಣ್, ಅಬ್ದುಲ್ ರೆಹಮಾನ್, ಮಹಿಳಾ ಪೇದೆಯಾದ ರಾಜಶ್ರೀ ಮತ್ತು ಮಾದಕ ದ್ರವ್ಯಗಳ ಪತ್ತೆಹಚ್ಚುವ ಶ್ವಾನ ಜಿಮ್ಮಿ ಆರೋಪಿತರ ಮನೆಗಳನ್ನು ಸಮಗ್ರವಾಗಿ ಪರಿಶೀಲಿಸಲಾಯಿತು.
ಗಾಂಜಾ ಮತ್ತು ಇತರೆ ಮಾದಕ ವಸ್ತುಗಳ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡತಕ್ಕದ್ದು, ಇದರ ಬಗ್ಗೆ ನಿಯಂತ್ರಣ ಸಾಧಿಸಲು ಸಾರ್ವಜನಿಕರು ಪೋಲಿಸ್ ಇಲಾಖೆಯೊಂದಿಗೆ ಕೈಜೋಡಿಸಲು ಮನವಿ ಮಾಡಿದರು.
ಕಲಬುರಗಿ ಜಿಲ್ಲಾ ಪೊಲೀಸ್ ವತಿಯಿಂದ ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆ ಮತ್ತು ಮಾರಾಟ ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಇಂತಹ ವಿಶೇಷ ಕಾರ್ಯಾಚರಣೆಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದ್ದು, ಮಾದಕ ವಸ್ತುಗಳಿಗೆ ಸಂಬಂಧಿಸಿದ ಯಾವುದೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.