ಸುದ್ದಿ ಸಂಗ್ರಹ ಶಹಾಬಾದ್
ಪ್ರವಾದಿ ಮೊಹಮ್ಮದ್ ಮತ್ತು ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ನಜೀಯಾ ಇಲಾಹಿಖಾನ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿ ಗುರುವಾರ ನಗರ ಪೊಲೀಸ ಠಾಣೆಗೆ ಮುಸ್ಲಿಂ ಮುಖಂಡರು ದೂರು ನೀಡಿದರು.
ಯುವ ಮುಖಂಡ ಮಹ್ಮದ ಮಸ್ತಾನ ಮಾತನಾಡಿ, ಸಾಮಾಜಿಕ ಜಾಲತಾಣದ ಪಾಡ್ಕಾಸ್ಟ್ ಒಂದರಲ್ಲಿ ನಜೀಯಾ ಇಲಾಹೀ ಖಾನ್ ಎಂಬುವವರು ಇಸ್ಲಾಂ ಧರ್ಮದ ಪವಿತ್ರ ಪ್ರವಾದಿ ಹಜರತ್ ಮೊಹಮ್ಮದ ಮತ್ತು ಅವರ ಕುಟುಂಬದ ಕುರಿತು ಅತ್ಯಂತ ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ, ಈ ಹೇಳಿಕೆಗಳನ್ನು ಮುಸ್ಲಿಂ ಸಮುದಾಯ ತೀವ್ರವಾಗಿ ಖಂಡಿಸುತ್ತದೆ ಎಂದರು.
ನಜೀಯಾ ಇಲಾಹೀ ಖಾನ್ ಅವರ ಬೇಜವಾಬ್ದಾರಿ ಹೇಳಿಕೆ ಜಗತ್ತಿನಾದ್ಯಂತ ಹಾಗೂ ದೇಶಾದ್ಯಂತ ಇರುವ ಕೋಟ್ಯಂತರ ಮುಸ್ಲಿಂ ಬಾಂಧವರ ಧಾರ್ಮಿಕ ಭಾವನೆಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ, ಈ ಘಟನೆಯಿಂದಾಗಿ ದೇಶದಾದ್ಯಂತ ಮುಸ್ಲಿಂ ಸಮುದಾಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ, ಸಾಮಾಜಿಕ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಇಂತಹ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡ ಮಹ್ಮದ ಇಮ್ರಾನ ಮಾತನಾಡಿ, ನಮ್ಮ ಪ್ರವಾದಿ ಮತ್ತು ಅವರ ಕುಟುಂಬವನ್ನು ನಾವು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೆವೆ. ಅವರ ವಿರುದ್ಧದ ಯಾವುದೆ ಅವಹೇಳನಕಾರಿ ಹೇಳಿಕೆ ಸಹಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ದ್ವೇಷ ಬಿತ್ತಲು ಯತ್ನಿಸುತ್ತಿರುವ ನಜೀಯಾ ಇಲಾಹೀ ಖಾನ್ ವಿರುದ್ಧ ತಕ್ಷಣವೇ ಎಫ್ಐಆರ್ ದಾಖಲಿಸಿ, ಅವರನ್ನು ಬಂಧಿಸಬೇಕು, ಕಾನೂನಿನ ಚೌಕಟ್ಟಿನಲ್ಲಿ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ನಗರದ ಮುಸ್ಲಿಂ ಮುಖಂಡರು ಮತ್ತು ವಿವಿಧ ಸಂಘಟನೆಗಳ ಪ್ರಮುಖರು ನಗರ ಪೊಲೀಸ್ ಠಾಣೆಯ ಪಿಐ ಪರಶುರಾಮ ವನಂಜಕರ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು
ಮುಖಂಡರಾದ ಜಹೀರ ಅಹ್ಮದ ಪಟವೇಗಾರ, ಸೈಯದ ಲಾಡ್ಲೆ ಹುಸೇನಿ, ಜಾಹೇದ ಸಾಹೇಬ, ಮಹ್ಮದ ಯೂನುಸ, ಸೈಯದ ಯೂನುಸ ಹುಸೇನಿ, ಮಹೇಬೂಬ, ಶೇಖ ಯೂನುಸ, ಮೇರಾಜ ಸಾಹೇಬ, ಅಮ್ಜದ ಜಮಾದಾರ, ಆಬೀದ ಗುತ್ತೆದಾರ ಸೇರಿದಂತೆ ನೂರಾರು ಮುಸ್ಲಿಂ ಸಮಾಜದ ಯುವಕರು ಭಾಗವಹಿಸಿದ್ದರು.