ಕಲಬುರಗಿ: ಸಂಗೋಳಗಿ ಸರ್ಕಾರಿ ಶಾಲೆಯ ಚಾವಣಿಯ ಪದರ ಕುಸಿತ

ತಾಲೂಕು

ಸುದ್ದಿ ಸಂಗ್ರಹ ಆಳಂದ
ತಾಲೂಕಿನ ಸಂಗೋಳಗಿ (ಸಿ) ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡದ ಚಾವಣಿಯ ಪದರ ಶನಿವಾರ ಕುಸಿದು ಬಿದ್ದಿದೆ. ಸದ್ಯ ಶಾಲಾ ತರಗತಿಗಳು ಹೊಸ ಕಟ್ಟಡದಲ್ಲಿ ನಡೆಯುತ್ತಿರುವುದರಿಂದ ಯಾವುದೆ ದುರ್ಘಟನೆ ಸಂಭವಿಸಿಲ್ಲ.

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿರುವ ಈ ಸರ್ಕಾರಿ ಶಾಲೆಯ ಹಳೆಯ ಕಟ್ಟಡದಲ್ಲಿ ಮೂರು ಕೋಣೆಗಳು ಇದ್ದವು. ಅಂದಾಜು 40 ವರ್ಷದ ಹಿಂದೆ ನಿರ್ಮಿಸಲಾದ ಕಟ್ಟಡವು ಈಗ ಬಳಕೆಯಲ್ಲಿಲ್ಲ. ಆದರೆ ಹೊಸ ಶಾಲೆಯ ಮುಂಭಾಗದಲ್ಲಿನ ಕಟ್ಟಡದಲ್ಲಿ ಮಕ್ಕಳು ಆಟೋಟದಲ್ಲಿ ನಿರತರಾಗಿರುತ್ತಾರೆ.

204 ವಿದ್ಯಾರ್ಥಿಗಳಿರುವ ಈ ಶಾಲೆಯ ಹೊಸ ಕಟ್ಟಡದಲ್ಲಿ 8 ಕೋಣೆಗಳಿವೆ. ಶಾಲೆಯ ವಿರಾಮದ ಸಂದರ್ಭದಲ್ಲಿ ಮಾತ್ರ ಇಲ್ಲವೆ ರಜೆ ದಿನಗಳಲ್ಲಿ ಹಳೆಯ ಕಟ್ಟಡದ ಸುತ್ತಲೂ ಮಕ್ಕಳು ಆಟ ಆಡುವುದು, ಕುಳಿತುಕೊಳ್ಳುವುದು ಸಾಮಾನ್ಯವಾಗಿರುವುದರಿಂದ ಆತಂಕಕ್ಕೆ ಕಾರಣವಾಗಿದೆ.

ಹಳೆಯ ಕಟ್ಟಡವನ್ನು ನೆಲಸಮಗೊಳಿಸಲು ಮುಖ್ಯ ಶಿಕ್ಷಕರು ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ. ನೆಲಸಮ ಕಾರ್ಯ ಮಾತ್ರ ವಿಳಂಬವಾಗಿದೆ. ಮಳೆಗಾಲದ ಮುನ್ನವೇ ಹಳೆಯ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಕಾರ್ಯ ಕೈಗೊಳ್ಳಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಸಿಆರ್‌ಪಿ ಧರ್ಮರಾಯ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಿದ್ದಾರೆ.

‘ಹಳೆಯ ಕಟ್ಟಡ ನೆಲಸಮಕ್ಕೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಲಾಗಿದೆ. ಹೊಸ ಕಟ್ಟಡದಲ್ಲಿ ತರಗತಿಗಳು ಮುಂದುವರಿಯಲಿವೆ. ಪಾಲಕರು ಮತ್ತು ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ’ ಎಂದು ಮುಖ್ಯ ಶಿಕ್ಷಕಿ ಪುಷ್ಪಾ ತಿಳಿಸಿದರು.

‘ಶಾಲೆಯ ಹಳೆಯ ಕಟ್ಟಡವು ಕುಸಿದು ಬಿದ್ದಿದ್ದು, ಇದು 6 ವರ್ಷದಿಂದ ಬಳಕೆಯಲ್ಲಿರಲಿಲ್ಲ. ಹೀಗಾಗಿ ಯಾವುದೆ ಸಮಸ್ಯೆ ಇಲ್ಲ. ಕಟ್ಟಡ ನೆಲಸಮಕ್ಕೆ ಶೀಘ್ರ ಕ್ರಮವಹಿಸಲಾಗುವುದು’ ಎಂದು ಆಳಂದ ಪ್ರಭಾರ ಬಿಇಒ ಅಣ್ಣಪ್ಪ ಹಾದಿಮನಿ ಮಾಹಿತಿ ನೀಡಿದರು.

ಇತ್ತೀಚೆಗೆ ಕಲಬುರಗಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಮೂರನೇ ಮಹಡಿಯ ತರಗತಿಯಲ್ಲಿನ ಚಾವಣಿಯ ಸಿಮೆಂಟ್ ಪದರ ಕಳಚಿ ಬಿಚ್ಚು ಮೂವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದರು. ಅದರ ಬೆನ್ನಲ್ಲೇ ಬಳಕೆಯಲ್ಲಿಲ್ಲದ ಶಾಲಾ ಕಟ್ಟಡದ ಚಾವಣಿಯ ಪದರ ಕುಸಿದು ಬಿದ್ದಿರುವುದು ಸರ್ಕಾರಿ ಶಾಲೆಗಳ ಕಟ್ಟಡದ ಸುರಕ್ಷೆಯ ಬಗ್ಗೆ ಆತಂಕ ಮೂಡಿಸಿದೆ.

Leave a Reply

Your email address will not be published. Required fields are marked *