ಸುದ್ದಿ ಸಂಗ್ರಹ ಚಿತ್ತಾಪುರ
ತಾಲೂಕಿನ ದಿಗ್ಗಾಂವ ಮತ್ತು ಚಿತ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಇಬ್ಬರನ್ನು ಬಂಧಿಸಿ 1,55,700 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಿಗ್ಗಾಂವ ಗ್ರಾಮದ ನಾಗರಾಜ ಸಾಬಣ್ಣ ಭಜಂತ್ರಿ (19) ಮತ್ತು ಅಭಿಷೇಕ ಅಮೃತ ಮಡಿವಾಳ (19) ಬಂಧಿತ ಆರೋಪಿಗಳು.
ಬಂಧಿತರಿಂದ 10 ಸಾವಿರ ರೂ ಮೌಲ್ಯದ 3 ಮೊಬೈಲ್, 35 ಸಾವಿರ ರೂ. ಮೌಲ್ಯದ 6 ಗ್ರಾಂ. ಬಂಗಾರದ ಸರ, 47,700 ರೂ. ಮೌಲ್ಯದ 9 ತೊಗರಿ ಚೀಲಗಳು, 20 ಸಾವಿರ ರೂ. ಮೌಲ್ಯದ ಎಚ್.ಪಿ. ನೀರಿನ ಮೋಟಾರ್ ಪಂಪ್, 3 ಸಾವಿರ ರೂ.ಮೌಲ್ಯದ 6 ಕಬ್ಬಿಣದ ಅಂಗಲ್ ಪೈಪ್‌ಗಳು, ಕೃತ್ಯಕ್ಕೆ ಬಳಸಿದ 40 ಸಾವಿರ ರೂ. ಮೌಲ್ಯದ ಬೈಕ್ ಸೇರಿ ಒಟ್ಟು 1,55,700 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಮನೆಯಲ್ಲಿದ್ದ ವಿವಿಧ ಕಂಪನಿಯ 3 ಮೊಬೈಲ್, 6 ಗ್ರಾಂ. ಬಂಗಾರದ ಸರವನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದಿಗ್ಗಾಂವ ಗ್ರಾಮದ ಶಿವಬಸಮ್ಮ ಕರದಳ್ಳಿ ಅವರು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಆರೋಪಿಗಳ ಪತ್ತೆಗೆ ಎಡಿಷನಲ್ ಎಸ್ಪಿ ಮಹೇಶ ಮೇಘಣ್ಣನವರ, ಡಿವೈಎಸ್ಪಿ ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಎಸ್.ಸಿ ಪಾಟೀಲ ಅವರ ನೇತೃತ್ವದಲ್ಲಿ ಪಿಎಸ್‌ಐ ಮಂಜುನಾಥ ರೆಡ್ಡಿ, ಸಿಬ್ಬಂದಿಗಳಾದ ಬಸವರಾಜ, ಅಜರುದ್ದೀನ್, ಅನೀಲ, ಅಯ್ಯಣ್ಣ, ದತ್ತಾತ್ರೇಯ ಮತ್ತು ವಿರೇಶ್ ಅವರನ್ನು ಒಳಗೊಂಡ ತಂಡ ರಚಿಸಿದ್ದರು.
ಈ ತಂಡ ತನಿಖೆ ನಡೆಸಿ ದಿಗ್ಗಾಂವ ಕ್ರಾಸ್ ಹತ್ತಿರ ಆರೋಪಿಗಳಾದ ನಾಗರಾಜ ಭಜಂತ್ರಿ ಮತ್ತು ಅಭಿಷೇಕ ಮಡಿವಾಳ ಅವರನ್ನು ಬಂಧಿಸಿ 1.55 ಲಕ್ಷ ರೂ. ಮೌಲ್ಯದ ಬೆಳೆಬಾಳುವ ವಸ್ತುಗಳನ್ನು ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಈ ಕಾರ್ಯವನ್ನು ಎಸ್‌ಪಿ ಅದ್ಧೂರು ಶ್ರೀನಿವಾಸಲು ಶ್ಲಾಘಿಸಿದ್ದಾರೆ.