ಸುದ್ದಿ ಸಂಗ್ರಹ ಟೆಹ್ರಾನ್
ಯುಎಇ ಬಂದರಿನಿಂದ ಹೊರಟ ಸ್ವಲ್ಪ ಸಮಯದಲ್ಲೆ ಥಾಯ್ ಧ್ವಜ ಹೊತ್ತ ಸರಕು ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯ ಬಳಿ ದಾಳಿ ನಡೆದಿದೆ.
ಸರಕು ಹಡಗಿನ ಮೇಲೆ ಬುಧವಾರ ದಾಳಿ ನಡೆದಿದೆ ಎಂದು ರಾಯಲ್ ಥಾಯ್ ನೌಕಾಪಡೆ ತಿಳಿಸಿದೆ. ಇಪ್ಪತ್ತು ನಾವಿಕರನ್ನು ರಕ್ಷಿಸಲಾಗಿದೆ. ಆದರೆ ಮೂವರು ಇನ್ನೂ ಪತ್ತೆಯಾಗಿಲ್ಲ.
ಥಾಯ್ ಕಂಪನಿ ಪ್ರೆಷಿಯಸ್ ಶಿಪ್ಪಿಂಗ್ ಪಿಸಿಎಲ್ ಒಡೆತನದ ಬೃಹತ್ ವಾಹಕ ನೌಕೆ ಮಯೂರಿ ನರಿ, ಯುಎಇಯ ಖಲೀಫಾ ಬಂದರಿನಿಂದ ಹೊರಟು ಭಾರತದ ಕಾಂಡ್ಲಾ ಬಂದರಿಗೆ ತೆರಳುತ್ತಿತ್ತು. ಹಡಗು ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವಾಗ ದಾಳಿಗೆ ಒಳಗಾಯಿತು.
ರಾಯಲ್ ಥಾಯ್ ನೌಕಾಪಡೆ ಬಿಡುಗಡೆ ಮಾಡಿದ ಛಾಯಾಚಿತ್ರಗಳು, ಹಡಗಿನ ಒಡಲು ಮತ್ತು ಮೇಲ್ಭಾಗದಿಂದ ದಟ್ಟವಾದ ಕಪ್ಪು ಹೊಗೆ ಹೊರಹೊಮ್ಮುತ್ತಿರುವುದನ್ನು ತೋರಿಸಿವೆ. ಸುತ್ತಮುತ್ತಲಿನ ನೀರಿನಲ್ಲಿ ಲೈಫ್ ರಾಫ್ಟ್ಗಳು ಕಂಡುಬಂದಿವೆ.
ದಾಳಿಯ ವಿವರ ಮತ್ತು ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರಾಯಲ್ ಥಾಯ್ ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ. ದಾಳಿಯ ಹೊಣೆಯನ್ನು ಇರಾನ್ ಹೊತ್ತುಕೊಂಡಿದೆ. ಒಮಾನಿ ನೌಕಾಪಡೆಯು 20 ನಾವಿಕರನ್ನು ರಕ್ಷಿಸಿದೆ. ಉಳಿದ ಮೂವರು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ರಾಯಲ್ ಥಾಯ್ ನೌಕಾಪಡೆಯ ಹೇಳಿಕೆಯ ಪ್ರಕಾರ, ಹಡಗು 178 ಮೀಟರ್ ಉದ್ದವಿದ್ದು 30,000 ಟನ್ ಭಾರ ಹೊತ್ತೊಯ್ಯುತ್ತದೆ. ಮಧ್ಯಪ್ರಾಚ್ಯವು ಬಿಕ್ಕಟ್ಟಿನಲ್ಲಿರುವಾಗಲೆ ಈ ದಾಳಿ ನಡೆದಿದೆ.
ಅಮೆರಿಕದ ಮಿಲಿಟರಿ ಪಡೆಗಳ ಬೆಂಬಲದೊಂದಿಗೆ ಇಸ್ರೇಲ್ ಫೆ.28 ರಂದು ಇರಾನ್ ವಿರುದ್ಧ ದಾಳಿ ನಡೆಸಿತು. ಟೆಲ್ ಅವಿವ್ ಮತ್ತು ಅಮೆರಿಕದ ಮಿಲಿಟರಿಗಳಿಗೆ ನೆಲೆ ನೀಡುತ್ತಿರುವ ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲೆ ದಾಳಿ ಮಾಡುವ ಮೂಲಕ ಇರಾನ್ ಪ್ರತೀಕಾರ ತೀರಿಸಿಕೊಂಡಿದೆ. ಜಾಗತಿಕ ಇಂಧನ ಪೂರೈಕೆಗಾಗಿ ವಿಶ್ವದ ಅತ್ಯಂತ ನಿರ್ಣಾಯಕ ಜಲಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಾಗಣೆಗೆ ಪದೆ ಪದೆ ಬೆದರಿಕೆ ಹಾಕಿದೆ.