ಸುದ್ದಿ ಸಂಗ್ರಹ ಚಿತ್ತಾಪುರ
ನಾಡು ನುಡಿ ಹಾಗೂ ಸರ್ಕಾರಿ ಕನ್ನಡ ಶಾಲೆಗಳ ಸಂರಕ್ಷಣೆಗಾಗಿ ರಾಜ್ಯಾದ್ಯಂತ ನಡೆಯುತ್ತಿರುವ “ಕನ್ನಡ ಶಾಲೆ ಉಳಿಸಿ– ಬೆಳೆಸಿ” ಅಭಿಯಾನಕ್ಕೆ ಹೊಸ ಚೈತನ್ಯ ದೊರೆತಿದ್ದು, ಕಲಬುರ್ಗಿ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಅಣ್ಣಾರಾಯ ವಿ ಇವಣಿ ಅವರನ್ನು ನೇಮಕ ಮಾಡಲಾಗಿದೆ.
ಕನ್ನಡ ಶಾಲೆಗಳ ಉಳಿವಿಗಾಗಿ ಜನಜಾಗೃತಿ ಮೂಡಿಸುವುದು, ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವುದು ಹಾಗೂ ಶಿಕ್ಷಣದ ಗುಣಮಟ್ಟ ಸುಧಾರಿಸುವ ಉದ್ದೇಶದೊಂದಿಗೆ ಈ ಅಭಿಯಾನ ರಾಜ್ಯಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಘಟನೆಯ ರಾಜ್ಯ ನಾಯಕರು, ಹಿರಿಯರು ಮತ್ತು ಕಾರ್ಯಕರ್ತರ ಒಮ್ಮತದ ನಿರ್ಧಾರದಂತೆ ಅಣ್ಣಾರಾಯ ವಿ ಇವಣಿ ಅವರಿಗೆ ಈ ಮಹತ್ವದ ಜವಾಬ್ದಾರಿ ವಹಿಸಲಾಗಿದೆ.
ನೂತನ ಜಿಲ್ಲಾಧ್ಯಕ್ಷ ಅಣ್ಣಾರಾಯ ವಿ ಇವಣಿ ಮಾತನಾಡಿ, ‘ಕನ್ನಡ ಶಾಲೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನಾಡು-ನುಡಿ ಉಳಿಸುವ ಹೋರಾಟದಲ್ಲಿ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಮತ್ತು ಕನ್ನಡಪರ ಸಂಘಟನೆಗಳ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಮಾದರಿ ಕಾರ್ಯಕ್ರಮಗಳು ರೂಪಿಸಲಾಗುವುದು’ ಎಂದರು.
ರಾಜ್ಯಮಟ್ಟದ ಅಭಿಯಾನದ ಉದ್ದೇಶಗಳಿಗೆ ತಕ್ಕಂತೆ ಕಲಬುರ್ಗಿ ಜಿಲ್ಲೆಯಲ್ಲಿ ಕನ್ನಡ ಶಾಲೆಗಳ ಬಲವರ್ಧನೆಗೆ ನಿರಂತರ ಹೋರಾಟ ನಡೆಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.