ಸುದ್ದಿ ಸಂಗ್ರಹ ಕಲಬುರಗಿ
ಶ್ರೇಷ್ಟ ತತ್ವಜ್ಞಾನಿ ಸ್ವಾಮಿ ವಿವೇಕಾನಂದರು ನೀಡಿರುವ ತತ್ವ, ಸಂದೇಶ ಸಾರ್ವಕಾಲಿಕ ಯುವಕರ ಶಕ್ತಿ ಸಂಜೀವಿನಿಯಾಗಿದೆ ಎಂದು ಪ್ರಾಚಾರ್ಯರ ರವೀಂದ್ರಕುಮಾರ ಸಿ ಬಟಗೇರಿ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್’ಎಸ್’ಎಸ್ ಘಟಕದ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಳ್ಳಲಾಗಿದ್ದ ‘ಸ್ವಾಮಿ ವಿವೇಕಾನಂದರ163ನೇ ಜನ್ಮದಿನೋತ್ಸವ-ರಾಷ್ಟ್ರೀಯ ಯುವ ದಿನಾಚರಣೆ”ಯಲ್ಲಿ ಮಾತನಾಡಿದ ಅವರು, ದೇಶದ ಭವ್ಯ ಪರಂಪರೆ ವಿಶ್ವಕ್ಕೆ ಪರಿಚಯಿಸಿ, ಭಾರತದಕೀರ್ತಿ ಪತಾಕೆ ಎಲ್ಲೆಡೆ ಪಸರಿಸುವಂತೆ ಮಾಡಿದ ಮಹಾನ ಚೇತನಶಕ್ತಿಯಾಗಿದ್ದಾರೆ. ಅವರ ಸಂದೇಶ ಯುವಶಕ್ತಿ ಅಳವಡಿಸಿಕೊಂಡು ದೇಶಕ್ಕೆ ಅಮೂಲ್ಯವಾದ ಕೊಡುಗೆ ನೀಡಬೇಕು ಎಂದರು.
ಎನ್’ಎಸ್’ಎಸ್ ಅಧಿಕಾರಿ ಎಚ್.ಬಿ ಪಾಟೀಲ್ ಮಾತನಾಡಿ, ಪ್ರತಿಯೊಬ್ಬರು ಸಕಾರಾತ್ಮಕ ಚಿಂತನೆ ಮೈಗೂಡಿಸಕೊಂಡು ಕಾರ್ಯನಿರ್ವಹಿಸಿದರೆ ಉನ್ನತವಾದ ಸಾಧನೆಯಾಗುತ್ತದೆ. ದೇಶದಿಂದ ಪಡೆದ ಜ್ಞಾನವನ್ನು, ದೇಶದ ಒಳೊತಿಗಾಗಿ ಬಳಸಬೇಕೆಂಬ ವಿವೇಕಾನಂದರ ತತ್ವವನ್ನು ಅಳವಡಿಸಿಕೊಳ್ಳಬೇಕು. ವಿವೇಕಾನಂದರು ಯುವಕರ ಬಗ್ಗೆ ಅಪಾರವಾದ ನಂಬಿಕೆ, ಕಾಳಜಿ ಹೊಂದಿದ್ದರು ಎಂದರು.
ವಿವೇಕಾನಂದರು ಶ್ರೇಷ್ಠ ಮಾನವತಾವಾದಿ, ತತ್ವಜ್ಞಾನಿಯಾಗಿದ್ದರು. ಯುವ ಸಮೂಹಕ್ಕೆ ದಾರಿದೀಪವಾಗಿದ್ದಾರೆ. ದೇಶದ ಯುವಶಕ್ತಿಯ ಸಂಪೂರ್ಣ ಸದುಪಯೋಗವಾಗಬೇಕು. ವಿದ್ಯಾರ್ಥಿ ದಿಸೆಯಿಂದಲೆ ನಿಗದಿತ ಗುರಿ ಮತ್ತು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಜೀವನದಲ್ಲಿ ಉನ್ನತವಾದ ಸಾಧನೆ ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಅಸ್ಮಾ ಜಬೀನ್, ಮಲ್ಲಿಕಾರ್ಜುನ ದೊಡ್ಡಮನಿ, ಸುವರ್ಣಲತಾ ಭಂಡಾರಿ, ನಯಿಮಾ ನಾಹಿದ್, ಮಲ್ಲಪ್ಪ ರಂಜಣಗಿ, ಗ್ರಂಥಪಾಲಕ ಲಿಂಗರಾಜ ಹಿರೇಗೌಡ, ಪ್ರದಸ ಪ್ರೇಮಾ ಸುರಪುರ, ದ್ವಿದಸ ರಾಮಚಂದ್ರ ಚವ್ಹಾಣ, ಅತಿಥಿ ಉಪನ್ಯಾಸಕರಾದ ವೀರೇಶ್ ಗೋಗಿ, ಶರಣು ಸುರಪುರ, ಅಲಿಯಾ ತಬಸ್ಸುಮ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.