ಕಲಬುರಗಿ: ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರಿಗೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಪ್ರದಾನ ಮಾಡಿದರು.
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕರ್ನಾಟಕ ರಾಜ್ಯ ಗೃಹ ಇಲಾಖೆಯಲ್ಲಿ ವಿಶಿಷ್ಟ ಹಾಗೂ ಅಗ್ರಗಣ್ಯ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಗೌರವಾನ್ವಿತ ರಾಜ್ಯಪಾಲರಿಂದ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಹಾಗೂ ಶ್ಲಾಘನೀಯ ಸೇವಾ ಪದಕ ಸಮಾರಂಭದಲ್ಲಿ ಪ್ರಾಮಾಣಿಕ ಮತ್ತು ದಕ್ಷತೆಯಿಂದ ಕೆಲಸ ಮಾಡಿದವರಿಗೆ ಪ್ರಶಸ್ತಿ ನೀಡಲಾಯಿತು.

ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ 19 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 2022, 2023ನೇ ಸಾಲಿನ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಘೋಷಿಸಲಾದ ರಾಷ್ಟ್ರಪತಿ ಪದಕ ನೀಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ, ಪೊಲೀಸ್ ಮಹಾನಿರ್ದೇಶಕ ಎಂ. ಎ. ಸಲೀಂ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ತುಷಾರ್ ಗಿರಿನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.