ಯೋಧನಿಗೆ ಟೋಲ್ ಪ್ಲಾಜಾ ಸಿಬ್ಬಂದಿಯಿಂದ ಥಳಿತ: 20 ಲಕ್ಷ ದಂಡ ವಿಧಿಸಿದ NHAI

ಸುದ್ದಿ ಸಂಗ್ರಹ

ಲಕ್ನೋ: ಕರ್ತವ್ಯಕ್ಕೆ ಮರಳುತ್ತಿದ್ದ ಯೋಧನನ್ನು ಟೋಲ್ ಪ್ಲಾಜಾ ಸಿಬ್ಬಂದಿ ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಥಳಿಸಿದ್ದ ಘಟನೆಗೆ ಸಂಬಂಧಿಸಿದಂತೆ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ (NHAI) ಮೀರತ್‌ನ ಟೋಲ್ ಸಂಸ್ಥೆಗೆ 20 ಲಕ್ಷ ರೂ. ದಂಡ ವಿಧಿಸಿದೆ.

ಉತ್ತರ ಪ್ರದೇಶದ ಮೀರತ್‌ನಲ್ಲಿ ಯೋಧ ಕಪಿಲ್ ಕವಾಡ್ ಎನ್ನುವವರ ಮೇಲೆ ಟೋಲ್ ಸಿಬ್ಬಂದಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಈ ಅಮಾನವೀಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಈಗಾಗಲೇ 6 ಜನರನ್ನು ಬಂಧಿಸಿದ್ದಾರೆ.

ಏನಿದು ಘಟನೆ ?
ಭಾರತೀಯ ಸೇನೆಯ ರಜಪೂತ ರೆಜಿಮೆಂಟ್‌ನಲ್ಲಿದ್ದ ಕಪಿಲ್ ಕವಾಡ್, ರಜೆಯ ನಿಮಿತ್ಯ ಮನೆಗೆ ತೆರಳಿದ್ದರು. ಶ್ರೀನಗರದಲ್ಲಿರುವ ತಮ್ಮ ಕರ್ತವ್ಯದ ಸ್ಥಳಕ್ಕೆ ಮರಳಲು ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಟೋಲ್ ಬೂತ್‌ನಲ್ಲಿ ಸಿಲುಕಿಕೊಂಡಿದ್ದಾರೆ. ತನ್ನ ವಿಮಾನಕ್ಕೆ ತಡವಾಗುತ್ತಿದೆ ಎಂಬ ಆತಂಕದಿಂದ ಕಪಿಲ್ ಕಾರಿನಿಂದ ಇಳಿದು ಟೋಲ್ ಬೂತ್ ಸಿಬ್ಬಂದಿಯೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ ವಾಗ್ವಾದ ಉಂಟಾಗಿದೆ.

ಟೋಲ್ ಪ್ಲಾಜಾದ ಐವರು ಸಿಬ್ಬಂದಿ ಕಪಿಲ್ ಮತ್ತು ಅವರ ಸೋದರ ಸಂಬಂಧಿಯನ್ನು ಥಳಿಸಿದ್ದಾರೆ. ಕಪಿಲ್‌ಗೆ ದೊಣ್ಣೆಯಿಂದ ಹೊಡೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲವು ದಾಳಿಕೋರರು ಕಪಿಲ್ ಅವರನ್ನು ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದಾರೆ. ವಿಡಿಯೋ ವೈರಲ್ ಆಗ್ತಿದ್ದಂತೆ ಕೇಸ್ ದಾಖಲಿಸಿಕೊಂಡ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *