ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆಗೆ ಗುಡ್ ನ್ಯೂಸ್ ನೀಡಿದ್ದರು. ಪ್ರಮುಖವಾಗಿ ಜಿಎಸ್‌ಟಿ ಕಡಿತದ ಕುರಿತು ಮಹತ್ವದ ಘೋಷಣೆ ಮಾಡಿದ್ದರು. ದೇಶದಲ್ಲಿ ಹೊಸ ಜಿಎಸ್‌ಟಿ ಸಿಸ್ಟಮ್ ಜಾರಿಗೆ ತರಲಾಗುತ್ತಿದೆ ಎಂದಿದ್ದರು. ಇಷ್ಟೇ ಅಲ್ಲ ಹಲವು ವಸ್ತುಗಳ ಮೇಲಿನ ಜಿಎಸ್‌ಟಿ ಕಡಿತಗೊಳಿಸುವುದಾಗಿ ಘೋಷಿಸಿದ್ದರು.
ವಿಶೇಷ ಅಂದರೆ ಈ ಬದಲಾವಣೆಯಿಂದ ದೇಶದಲ್ಲಿ ಹಲವು ವಸ್ತುಗಳ ಮೇಲಿನ ಬೆಲೆ ಕಡಿತಗೊಳ್ಳಲಿದೆ. ಈ ಪೈಕಿ ದಿನಬಳಕೆ ವಸ್ತುಗಳ ಮೇಲಿನ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ.
ಜಿಎಸ್‌ಟಿ ಎಷ್ಟು ಇಳಿಕೆಯಾಗಲಿದೆ ?
ಸರಕು, ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ತೆರಿಗೆ ಶೇಕಡಾ 12, 18, 28ರಷ್ಟು ವಿಧಿಸಲಾಗಿದೆ. ತಂಬಾಕು ಸೇರಿದಂತೆ ಇತರ ಕೆಲ ವಸ್ತುಗಳ ಮೇಲೆ ಗರಿಷ್ಠ ಜಿಎಸ್‌ಟಿ ವಿಧಿಸಲಾಗಿದೆ. ಈ ಪೈಕಿ ದಿನ ನಿತ್ಯ ಬಳಕೆ ವಸ್ತುಗಳ ಮೇಲಿನ ಜಿಎಸ್‌ಟಿ ಶೇಕಡಾ 90 ರಷ್ಟು ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದ ಶೇಕಡಾ 28 ರಷ್ಟಿದ್ದ ಜಿಎಸ್‌ಟಿ ಇನ್ನು ಶೇಕಡಾ 18ಕ್ಕೆ ಇಳಿಕೆಯಾಗಲಿದೆ. ಇನ್ನು ಶೇಕಡಾ 12ರಷ್ಟಿದ್ದ ಜಿಎಸ್‌ಟಿ ಕೇವಲ ಶೇಕಡಾ 5ಕ್ಕೆ ಇಳಿಕೆಯಾಗಲಿದೆ. ಪ್ರತಿ ನಿತ್ಯ ಬಳಕೆ ವಸ್ತುಗಳ ಮೇಲಿನ ಜಿಎಸ್‌ಟಿ ಶೇಕಡಾ 5ಕ್ಕೆ ಇಳಿಕೆ ಮಾಡಲಾಗುತ್ತದೆ. ಈ ಕುರಿತು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ. ಈ ಬದಲಾವಣೆಯಿಂದ ವಾರ್ಷಿಕ 50,000 ಕೋಟಿ ರೂ ಜಿಎಸ್‌ಟಿ ಸಂಗ್ರಹ ನಷ್ಟವಾಗಲಿದೆ.
ಕಾರು, ಬೈಕ್ ಬೆಲೆ ಇಳಿಕೆ
ಪ್ರಯಾಣಿಕರ ವಾಹನ, ವಾಣಿಜ್ಯ ವಾಹನಗಳ ಮೇಲಿನ ಜಿಎಸ್‌ಟಿ ಇಳಿಕೆಯಾಗಲಿದೆ. ಇನ್ನು ದ್ವಿಚಕ್ರ ವಾಹನ ಮೇಲಿನ ಜಿಎಸ್‌ಟಿ ಕೂಡ ಇಳಿಕೆಯಾಗಲಿದೆ. ಹೀಗಾಗಿ ವಾಹನಗಳ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ. ಆದರೆ ವಿದೇಶಗಳಿಗೆ ರಫ್ತು ಮಾಡುವ ವಸ್ತುಗಳ ಮೇಲೆ ಸುಂಕ ಯಥವತ್ತಾಗಿ ಇರಲಿದೆ. ಈ ಪೈಕಿ ಡೈಮಂಡ್ ಇತರ ಕೆಲ ಅಮೂಲ್ಯ ವಸ್ತುಗಳ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಯಾಗುವ ಸಾಧ್ಯತೆ ಇಲ್ಲ.
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುತ್ತಾ ?
ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವುದಿಲ್ಲ. ಈ ನಿಯಮ ಮುಂದುವರಿಯಲಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿ ಅಡಿ ತರಲು ಕೌನ್ಸಿಲ್ ಸಭೆ ಸದಸ್ಯರು ಒಪ್ಪಿಲ್ಲ. ಹೀಗಾಗಿ ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಯಾವುದೆ ಬದಲಾವಣೆ ಆಗುವುದಿಲ್ಲ. ಪ್ರಮುಖವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಸಗಳಿರುವುದಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಬೆಲೆ ಬದಲಾಗಬಹುದು. ಹೊಸ ಜಿಎಸ್‌ಟಿ ಕಾರಣದಿಂದ ಯಾವುದೆ ಬದಲಾವಣೆ ಆಗುವುದಿಲ್ಲ.
ಟೂತ್‌ಪೇಸ್ಟ್, ಛತ್ರಿ, ಗೃಹ ಬಳಕೆ ವಸ್ತುಗಳು, ಪ್ರೆಶರ್ ಕುಕ್ಕರ್, ವಾಶಿಂಗ್ ಮಶಿನ್, ಬೈಸಿಕಲ್, ರೆಡಿಮೇಡ್ ಗಾರ್ಮೆಮಂಟ್ಸ್, ಚಪ್ಪಲಿ, ಲಸಿಕೆ, ಸೆರಾಮಿಕ್ ಟೈಲ್ಸ್, ಕೃಷಿ ಸಲಕರಣೆ ಮೇಲಿನ ಜಿಎಸ್‌ಟಿ ಇಳಿಕೆ ಮಾಡಲಾಗುತ್ತದೆ. ಇದರಿಂದ ಈ ವಸ್ತುಗಳ ಬೆಲೆ ಇಳಿಕೆಯಾಗಲಿದೆ. ಮೊಬೈಲ್, ಕಂಪ್ಯೂಟರ್, ಕೂದಲಿನ ಎಣ್ಣೆ, ವಿದ್ಯಾರ್ಥಿಗಳ ಸಲಕರಣೆಗಳ ಬೆಲೆ ಕಡಿಮೆಯಾಗುತ್ತದೆ. ತರಕಾರಿ, ಹಣ್ಣು, ಡೈರಿ ಉತ್ಪನ್ನಗಳು ಸೇರಿದಂತೆ ಕೆಲ ವಸ್ತುಗಳಿಗೆ ಶೂನ್ಯ ಜಿಎಸ್‌ಟಿ ಇರಲಿದೆ ಎಂದು ಹೇಳಲಾಗಿದೆ.