ಕಲಬುರಗಿ: ರಕ್ತದಾನ, ಅಂಗಾಂಗ ದಾನ, ದೇಹ ದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಯುವುದರ ಜೊತೆಗೆ ದಾನಿ ಸತ್ತ ನಂತರವು ದಾನ ಮಾಡಿದ ಅಂಗಾಂಗಳ ಮೂಲಕ ಬದುಕಬಹುದಾಗಿದೆ, ಅಂಗಾಂಗ ದಾನಿಗಳಿಗೆ ಸಾವಿಲ್ಲ ಎಂದು ಖ್ಯಾತ ಕುಟುಂಬ ವೈದ್ಯ ಡಾ.ರಾಜಶೇಖರ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ಜೆ.ಆರ್ ನಗರದಲ್ಲಿನ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದಿಂದ ಬುಧವಾರ ಸಂಜೆ ಜರುಗಿದ ‘ವಿಶ್ವ ಅಂಗಾಂಗ ದಾನ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ವೈದ್ಯ ವಿಜ್ಞಾನ ಎಷ್ಟೆ ಮುಂದುವರೆದರು ಮಾನವನ ದೇಹದ ಅಂಗಗಳು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ರಕ್ತ, ಕಿಡ್ನಿ, ಹೃದಯ, ನೇತ್ರ, ಶ್ವಾಸಕೋಶ ಸೇರಿದಂತೆ ಅಂಗಾಂಗಗಳು ಮಾನವನಿಂದಲೇ ಪಡೆಯಬೇಕಾಗಿರುವುದರಿಂದ ಮರಣದ ನಂತರ ದೇಹ ಮಣ್ಣು, ಅಗ್ನಿ ಪಾಲಾಗುವ ಬದಲು, ಅಂಗಾಂಗ, ದೇಹ ದಾನ, ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಯುತ್ತದೆ ಎಂದರು.
ನಮ್ಮ ದೇಶದಲ್ಲಿ ಅಂಗಾಂಗಗಳ ಬೇಡಿಕೆ ಹೆಚ್ಚಾಗಿದೆ, ದಾನಿಗಳ ಸಂಖ್ಯೆ ಕಡಿಮೆಯಿದೆ. ಅಂಗದಾನಗಳಿಂದ ಯಾವುದೆ ತೊಂದರೆಯಿಲ್ಲ ಎಂಬುದನ್ನು ಅರಿತು, ದಾನ ಮಾಡಲು ಮುಂದಾಗಬೇಕು. ಇದರ ಬಗ್ಗೆ ಚಳುವಳಿಯ ರೂಪದಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂದ ಅಂಗಾಂಗ ವೈಫಲ್ಯತೆ ಹೆಚ್ಚಾಗಿದ್ದು, ದಾನಿಗಳ ಸಂಖ್ಯೆ ಅಧಿಕವಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ, ಮನುಷ್ಯ ಸ್ವಾರ್ಥಕ್ಕಾಗಿ ಬದುಕಿದರೆ, ಅಂತಹ ಜೀವನಕ್ಕೆ ಅರ್ಥವಿಲ್ಲ. ಕೈಲಾದಷ್ಟು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ‘ಬದುಕಿರುವ ತನಕ ರಕ್ತದಾನ, ಬದುಕಿನ ನಂತರ ದೇಹದಾನ’ ಮಾಡುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ದತ್ತು ಹಡಪದ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಮೌಸಿನ್ ಪಟೇಲ್, ಸುಸ್ಮಿತಾ, ಮೊಹಮ್ಮದ್ ಜುಬೇದ್, ನಂದಿನಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.