ಕಲಬುರಗಿ: ಕೇಸರಿ, ಬಿಳಿ, ಹಸಿರು ಬಣ್ಣ ಮತ್ತು ನಡುವೆ ಅಶೋಕ ಚಕ್ರವಿರುವ ಭಾರತ ದೇಶದ ತ್ರಿವರ್ಣ ಧ್ವಜವು ಭಾರತದಲ್ಲಿರುವ ಎಲ್ಲರಿಗೂ ಒಂದೆಯಾಗಿರುವ ಹೆಮ್ಮೆಯ, ಗೌರವ, ಸಮಾನತೆ ಹಾಗೂ ಸಾರ್ವಭೌಮತೆ ಸಾರುವ ಚಿಹ್ನೆಯಾಗಿದೆ. ಅದನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಪ್ರಾಚಾರ್ಯ ರವೀಂದ್ರಕುಮಾರ ಸಿ ಬಟಗೇರಿ ಹೇಳಿದರು.
ಜಿಲ್ಲೆಯ ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್’ಎಸ್’ಎಸ್ ಘಟಕದ ವತಿಯಿಂದ ಮಂಗಳವಾರ ಜರುಗಿದ ‘ರಾಷ್ಟ್ರ ಧ್ವಜ ಅಂಗೀಕಾರ ದಿನಾಚರಣೆ’ ಕಾರ್ಯಕ್ರಮದಲ್ಲಿ ಧ್ವಜಾ ಅರಳಿಸಿ, ನಂತರ ವಿದ್ಯಾರ್ಥಿಗಳಿಗೆ ಧ್ವಜದ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ಎನ್’ಎಸ್’ಎಸ್ ಅಧಿಕಾರಿ ಎಚ್.ಬಿ ಪಾಟೀಲ ಮಾತನಾಡಿ, ರಾಷ್ಟ್ರ ಧ್ವಜ, ಲಾಂಛನ ಸೇರಿದಂತೆ ದೇಶದ ಸಂಕೇತಗಳ ಬಗ್ಗೆ ವಿದ್ಯಾರ್ಥಿ ದೆಸೆಯಿಂದಲೆ ತಿಳಿದುಕೊಳ್ಳಬೇಕು. ಸಂವಿಧಾನ ರಚನಾ ಸಭೆಯು 1947ರ ಜುಲೈ-22ರಂದು ರಾಷ್ಟ್ರ ಧ್ವಜವನ್ನು ಅಂಗೀಕರಿಸಿದ ದಿನದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಆಂಧ್ರಪ್ರದೇಶದ ಪಿಂಗಾಲಿ ವೆಂಕಯ್ಯನವರು ಧ್ವಜದ ವಿನ್ಯಾಸಕಾರರಾಗಿದ್ದಾರೆ. ಧ್ವಜದ ಅವರೋಹಣ, ಆರೋಹಣ ಪದ್ಧತಿಯ ಬಗ್ಗೆ ಚೆನ್ನಾಗಿ ಅರಿಯಬೇಕು. ಯುವಕರು ದೇಶ ಪ್ರೇಮದಿಂದ ದೂರವಾಗಬಾರದು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಮಲ್ಲಿಕಾರ್ಜುನ ದೊಡ್ಡಮನಿ, ಸುವರ್ಣಲತಾ ಭಂಡಾರಿ, ಮ್ಲಲಪ್ಪ ರಂಜಣಗಿ, ಗ್ರಂಥಪಾಲಕ ಲಿಂಗರಾಜ ಹಿರೇಗೌಡ, ಶಿಕ್ಷಣ ಪ್ರೇಮಿ ಬಸವರಾಜ ಹಡಪದ, ಅತಿಥಿ ಉಪನ್ಯಾಸಕರಾದ ನಾರಾಯಣಸ್ವಾಮಿ, ಶರಣು ಸುರಪುರ, ವಿರೇಶ ಗೋಗಿ ಮತ್ತು ವಿದ್ಯಾರ್ಥಿಗಳು ಇದ್ದರು.