ಕಲಬುರಗಿ: ಕೇಸರಿ, ಬಿಳಿ, ಹಸಿರು ಬಣ್ಣ ಹಾಗೂ ನಡುವೆ ಅಶೋಕ ಚಕ್ರವಿರುವ ಭಾರತ ದೇಶದ ತ್ರಿವರ್ಣ ಧ್ವಜವು ಭಾರತದಲ್ಲಿರುವ ಎಲ್ಲರಿಗೂ ಒಂದೆಯಾಗಿರುವ ಹೆಮ್ಮೆಯ, ಗೌರವ, ಸಮಾನತೆ ಮತ್ತು ಸಾರ್ವಭೌಮತೆ ಸಾರುವ ಚಿಹ್ನೆಯಾಗಿದೆ ಎಂದು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ನವಾಬಖಾನ್ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಸಂಜೆ ಜರುಗಿದ ‘ರಾಷ್ಟ್ರ ಧ್ವಜ ಅಂಗೀಕಾರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ನಾಗರಿಕ ರಾಷ್ಟ್ರ ಧ್ವಜಕ್ಕೆ ಗೌರವ ನೀಡಬೇಕು ಎಂದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ರಾಷ್ಟ್ರ ಧ್ವಜ, ಲಾಂಛನ ಸೇರಿದಂತೆ ದೇಶದ ಸಂಕೇತಗಳ ಬಗ್ಗೆ ವಿದ್ಯಾರ್ಥಿ ದೆಸೆಯಿಂದಲೆ ತಿಳಿದುಕೊಳ್ಳಬೇಕು. ಸಂವಿಧಾನ ರಚನಾ ಸಭೆಯು 1947ರ ಜುಲೈ-22ರಂದು ರಾಷ್ಟ್ರ ಧ್ವಜವನ್ನು ಅಂಗೀಕರಿಸಿದ ದಿನದ ಸ್ಮರಣಾರ್ಥವಾಗಿ ಈ ದಿನ ಆಚರಿಸಲಾಗುತ್ತದೆ. ಆಂಧ್ರಪ್ರದೇಶದ ಪಿಂಗಾಲಿ ವೆಂಕಯ್ಯನವರು ಧ್ವಜದ ವಿನ್ಯಾಸಕಾರರಾಗಿದ್ದಾರೆ. ಧ್ವಜದ ಅವರೋಹಣ, ಆರೋಹಣ ಪದ್ಧತಿಯ ಬಗ್ಗೆ ಚೆನ್ನಾಗಿ ಅರಿಯಬೇಕು. ಯುವಕರು ದೇಶಪ್ರೇಮದಿಂದ ದೂರವಾಗಬಾರದು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಅಸ್ಲಾಂ ಶೇಖ್, ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ ಶೇಖ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.