ಕಲಬುರಗಿ: ಗೊಬ್ಬುರ(ಬಿ) ಗ್ರಾಮದ ಐತಿಹಾಸಿಕ ಸ್ಮಾರಕಗಳು ಕನ್ನಡಿಗರ ಹಿರಿಮೆ, ಗರಿಮೆ, ಇತಿಹಾಸವನ್ನು ಸಾರುತ್ತಿವೆ ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು.
ಅಫಜಲಪುರ ತಾಲೂಕಿನ ಗೊಬ್ಬುರ(ಬಿ) ಗ್ರಾಮದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-24ರಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಗೊಬ್ಬುರ(ಬಿ) ಗ್ರಾಮಕ್ಕೆ ಸಂತೆ ಗೊಬ್ಬುರು ಎಂಬುದು ಶಾಸನೋಕ್ತ ಹೆಸರು.10,11 ಮತ್ತು 12ನೇ ಶತಮಾನದಲ್ಲಿ ಈ ಗ್ರಾಮವು ಕರುನಾಡಿನ ಬಹುದೊಡ್ಡ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿ ದೇಶದ ಗಮನ ಸೆಳೆದಿತ್ತು. ಕಲ್ಯಾಣ ಚಾಲುಕ್ಯರ ಮತ್ತು ಕಳಚೂರು ಕಾಲದಲ್ಲಿ ಈ ಗ್ರಾಮವು ಉನ್ನತ ಶಿಕ್ಷಣ ನೀಡುವ ಅಗ್ರಹಾರವಾಗಿ, ಧರ್ಮ, ಆಧ್ಯಾತ್ಮದ ನೆಲವೀಡವಾಗಿತ್ತು ಎಂಬದು ಐತಿಹಾಸಿಕ ದಾಖಲೆಗಳಿಂದ ತಿಳಿದುಬರುತ್ತದೆ. ಖಾಂಡವ ಮಂಡಲ ಎಂಬ ಆಡಳಿತ ಘಟಕದ ವ್ಯಾಪ್ತಿಯಲ್ಲಿ ಈ ಗ್ರಾಮವು ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದೆ. ಈ ಗ್ರಾಮದಲ್ಲಿ ಕಲ್ಯಾಣ ಚಾಲುಕ್ಯರ ಮೂರು ಮತ್ತು ಕಲಚೂರು ಅರಸು ಮನೆತನಕ್ಕೆ ಸೇರಿದ ಮೂರು ಶಾಸನಗಳು ಒಟ್ಟು ಆರು ಶಾಸನಗಳು ಕನ್ನಡ ನಾಡಿನ ರೋಚಕ ಕಥೆಗಳನ್ನು ಸಾರುತ್ತಿವೆ ಎಂದರು.
ಗೊಬ್ಬುರ(ಬಿ) ಗ್ರಾಮದಲ್ಲಿ ಕಲ್ಲಾಲಿಂಗೇಶ್ವರ ದೇವಾಲಯವು ಬಹಳ ಕಲಾತ್ಮಕವಾಗಿದೆ, ಇಲ್ಲಿಯ ಶಿಲಾಬಾಲಿಕೆಯರ ಶಿಲ್ಪಗಳು, ದೇವಾನು ದೇವತೆಗಳ, ಗಜಪಡೆ ಸೇರಿದಂತೆ ವಿವಿಧ ಶಿಲ್ಪಗಳು ನಯನ ಮನೋಹರವಾಗಿವೆ. ಇತಿಹಾಸ ಪ್ರಿಯರಿಗೆ ರಸದೌತಣವಾಗಿವೆ. ಗೊಬ್ಬೂರಿನ ಕ್ರಿ.ಶ 1140, ಕ್ರಿ.ಶ 1170 ಶಾಸನಗಳು ಸಾವಿರ ವರ್ಷಗಳ ಇತಿಹಾಸ, ಅಂದಿನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಅರಸು ಮನೆತನಳ ಆಡಳಿತ ಸೇರಿದಂತೆ ಮುಂತಾದವುಗಳ ಮೇಲೆ ಬೆಳಕು ಚೆಲ್ಲುತ್ತವೆ. ಇಂತಹ ಐತಿಹಾಸಕ ಸ್ಮಾರಕಗಳ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದರು.
ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ ಮಾತನಾಡಿ, ಕಳದೆ ಒಂದು ವರ್ಷದಿಂದ ನಮ್ಮ ಬಳಗದ ವತಿಯಿಂದ ಜಿಲ್ಲೆಯಾದ್ಯಂತ ಸಂಚರಿಸಿ ಐತಿಹಾಸಿಕ ಸ್ಮಾರಕಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ಗ್ರಾಮದಲ್ಲಿರುವ ಆಳಿವಿನಂಚಿನಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ರಕ್ಷಣೆಗೆ ಗ್ರಾಮಸ್ಥರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ಗ್ರಾಮಸ್ಥರಾದ ಕಲ್ಯಾಣಪ್ಪ ಹೂಗಾರ, ವೈಷ್ಣವಿ, ಗುರುರಾಜ, ಶುಶೀಲ್ ಹಡಪದ, ಶ್ರೀನಿವಾಸ ನಡವಿನಮನಿ, ಸಂಗಮೇಶ್, ಸಮರ್ಥ ಇಟಗೊಂಡ್, ನಿರ್ಮಲಾ ಸೇರಿದಂತೆ ಮುಂತಾದವರು ಇದ್ದರು.