ರಾಯಚೂರು: ತಾಲೂಕಿನ ಗುರ್ಜಾಪುರ ಬಳಿಯ ಕೃಷ್ಣಾ ನದಿಯ ಬ್ರಿಜ್ ಕಂ ಬ್ಯಾರೇಜ್ ಮೇಲೆ ಫೋಟೋ ತೆಗೆಸಿಕೊಳ್ಳುತ್ತಿದ್ದ ವ್ಯಕ್ತಿಯನ್ನು ಆತನ ಪತ್ನಿಯೇ ಶನಿವಾರ ನದಿಗೆ ತಳ್ಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮೂರು ತಿಂಗಳ ಹಿಂದೆಯಷ್ಟೆ ಮದುವೆಯಾಗಿರುವ ನವದಂಪತಿ ಸೇತುವೆ ಮಾರ್ಗದಿಂದ ತೆರಳುವ ಸಂದರ್ಭದಲ್ಲಿ ಬ್ಯಾರೇಜ್ ಮೇಲೆ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳಲು ನಿರ್ಧರಿಸಿದ್ದಾರೆ.
ಮೊದಲು ಪತ್ನಿಯ ಫೋಟೋ ತೆಗೆದ ಪತಿ ಬಳಿಕ ತನ್ನ ಫೋಟೋ ತೆಗೆಯುವಂತೆ ಪತ್ನಿಗೆ ಹೇಳಿದ್ದಾನೆ.
ಸೇತುವೆ ಕಟ್ಟೆಯ ಮೇಲೆ ನಿಲ್ಲಿಸಿ ಸಮೀಪದಿಂದ ಪೋಟೋ ಕ್ಲಿಕ್ಕಿಸುವ ನೆಪದಲ್ಲಿ ಪತಿಯನ್ನು ನದಿಗೆ ತಳ್ಳಿದ್ದಾಳೆ. ನಂತರ ತನ್ನ ತಾಯಿಗೆ ಫೋನ್ನಲ್ಲಿ ಕರೆ ಮಾಡಿ ನನ್ನ ಪತಿ ಸೇತುವೆ ಮೇಲಿಂದ ನದಿಯಲ್ಲಿ ಬಿದ್ದಿದ್ದಾರೆ ಎಂದು ತಿಳಿಸಿದ್ದಾಳೆ.
ತಾತಪ್ಪ ಹೇಗೋ ಪ್ರಯಾಸಪಟ್ಟು ಈಜಿಕೊಂಡು ಹೋಗಿ ಕಲ್ಲು ಬಂಡೆಯ ಮೇಲೆ ಕುಳಿತು ರಕ್ಷಣೆಗಾಗಿ ಕೂಗಿದ್ದಾರೆ. ದಾರಿಹೋಕರು ಇದನ್ನು ಗಮನಿಸಿ ಸ್ಥಳೀಯರಿಂದ ಹಗ್ಗ ತರಿಸಿ ಎರಡು ಗಂಟೆ ಪ್ರಯಾಸಪಟ್ಟು ರಕ್ಷಣೆ ಮಾಡಿದ್ದಾರೆ.
ಏಪ್ರಿಲ್ 10 ಶಕ್ತಿನಗರ ತಾತಪ್ಪ ಹಾಗೂ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗ್ರಾಮವೊಂದರ ಗದ್ದೆಮ್ಮ ಅವರ ವಿವಾಹವಾಗಿದೆ. ಮೂರೇ ತಿಂಗಳಲ್ಲಿ ಘಟನೆ ನಡೆದಿರುವುದು ಹಲವು ಚರ್ಚೆಗೆ ಕಾರಣವಾಗಿದೆ. ದಂಪತಿಯ ಎರಡು ಕುಟುಂಬಗಳು ಮಾತುಕತೆ ನಡೆಸಿದ್ದು, ನಂತರ ದೂರು ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದೆಲ್ಲವನ್ನೂ ಸಹಜವೆನ್ನುವಂತೆ ಪತ್ನಿ ನೋಡುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ನದಿಗೆ ಬಿದ್ದಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ವಿಷಯ ಬಯಲಿಗೆ ಬಂದಿದೆ. ‘ನನ್ನ ಪತ್ನಿಯೇ ನನ್ನನ್ನು ನದಿಗೆ ನೂಕಿದ್ದಾಳೆ’ ಎಂದು ತಾತಪ್ಪ ಹೇಳಿದರೆ, ‘ತಾತಪ್ಪನೇ ಆಯತಪ್ಪಿ ನದಿಗೆ ಬಿದಿದ್ದಾರೆ’ ಎಂದು ಗದ್ದೆಮ್ಮ ಉತ್ತರಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬ್ಯಾರೇಜ್ ಮುಂಭಾಗದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಇಲ್ಲಿ ಮೊಸಳೆಗಳು ಅಧಿಕ ಸಂಖ್ಯೆಯಲ್ಲಿವೆ. ತಾತಪ್ಪ, ಅದೃಷ್ಟವಶಾತ್ ಪ್ರಾಣ ಉಳಿಸಿಕೊಂಡಿದ್ದಾರೆ.