ಕಲಬುರಗಿ: ಕುಷ್ಠರೋಗ ಶಾಪ, ಹಿಂದಿನ ಜನ್ಮದ ಪಾಪದ ಪ್ರತಿಫಲ, ಗುಣಪಡಿಸಲು ಅಸಾಧ್ಯವೆಂಬ ನಂಬಿಕೆ ಅಥವಾ ಅಭಿಪ್ರಾಯ ಬೇಡ. ಕುಷ್ಠರೋಗದ ಲಕ್ಷಣಗಳು ಕಂಡುಬಂದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಬಹುದಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಹೇಳಿದರು.
ನಗರದ ಶೇಖರೋಜಾದ ಶಹಾಬಜಾರ ಯುಪಿಎಚ್‌ಸಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಗುರುವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನೆ ದಿನಾಚರಣೆ ಹಾಗೂ ‘ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ-2025’ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡದ ಅವರು, ಮೈಕ್ರೋಬ್ಯಾಕ್ಟಿರಿಯಂ ಲೆಪ್ರೆಂ ಎಂಬ ಬ್ಯಾಕ್ಟಿರೀಯಾದಿಂದ ಇದು ಉಂಟಾಗುತ್ತದೆ. ತಿಳಿ ಬಿಳಿ ತಾಮ್ರ ವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆ, ಅಂಗೈ ಮತ್ತು ಪಾದಗಳಲ್ಲಿ ಜೋಮು ಹಿಡಿಯುವುದು, ಚರ್ಮದ ಬಣ್ಣ ನಾಶವಾಗುವುದು, ಕೆಂಪಾಗುವುದು, ಒಣಗಿದ ಚರ್ಮ, ಹುಬ್ಬಿನ ಆಕಾರದಲ್ಲಿ ಬದಲಾವಣೆ ಸೇರಿದಂತೆ ಮುಂತಾದ ಕೆಲವು ಕುಷ್ಠರೋಗದ ಪ್ರಮುಖ ಲಕ್ಷಣಗಳಾಗಿವೆ. ಇವುಗಳು ಕಂಡುಬಂದರೆ ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಾಯಿಲೆ ದೃಢಪಟ್ಟರೆ ಭಯಪಡದೆ, ಸೂಕ್ತ ಚಿಕಿತ್ಸೆ, ತಜ್ಞ ವೈದ್ಯರ ಸಲಹೆ-ಸೂಚನೆಗಳನ್ನು ಪಾಲಿಸಬೇಕು. ಆರೋಗ್ಯ ಇಲಾಖೆಯ ‘ಕುಷ್ಠರೋಗ ಮುಕ್ತ ಭಾರತ’ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ಗಂಗಾಜ್ಯೋತಿ ಗಂಜಿ, ರೇಷ್ಮಾ ನಕ್ಕುಂದಿ, ನಾಗೇಶ್ವರಿ ಮುಗಳಿವಾಡಿ, ಸಂಗಮ್ಮ ಅತನೂರ್, ಮಂಗಳಾ ಚಂದಾಪುರೆ, ಲಕ್ಷ್ಮಿ, ಶ್ರೀದೇವಿ, ಚಂದಮ್ಮ ಮರಾಠ, ಚಂದ್ರಕಲಾ ಮಠಪತಿ, ಅರ್ಚನಾ ಸಿಂಗೆ, ಅನಿತಾ ಕಣಸೂರ, ನಾಗಮ್ಮ ಚಿಂಚೋಳಿ, ಸಿದ್ರಾಮ ಹೊಸಮನಿ ಹಾಗೂ ಬಡವಾಣೆಯ ಮಹಿಳೆಯರು, ನಾಗರಿಕರು ಭಾಗವಹಿಸಿದ್ದರು