ಬೆಂಗಳೂರು: ಮಹಾರಾಷ್ಟ್ರದ ವೈಶಿಷ್ಟ್ಯವೆಂದು ಪರಿಗಣಿಸಲಾದ ಕೊಲ್ಹಾಪುರಿ ಚಪ್ಪಲಿಯನ್ನು ವಿಶ್ವಖ್ಯಾತ ಫ್ಯಾಷನ್ ಸಂಸ್ಥೆ ಪ್ರಾದ 1.2 ಲಕ್ಷ ರೂ ಬೆಲೆಗೆ ಮಾರಾಟ ಮಾಡುತ್ತಿದೆ ಎನ್ನುವ ಸುದ್ದಿ ಇದೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ದೊರೆಯುವ ಈ ಚಪ್ಪಲಿ ತಯಾರಿಕೆಯಲ್ಲಿ ಕರ್ನಾಟಕದವರ ಪಾತ್ರವೂ ದೊಡ್ಡದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಬಗ್ಗೆ ಎಕ್ಸ್ನಲ್ಲಿ ಮಾಹಿತಿ ಪೋಸ್ಟ್ ಮಾಡಿದ್ದಾರೆ. ಕೊಲ್ಹಾಪುರಿ ಚಪ್ಪಲಿಗೆ ಕರ್ನಾಟಕದ ಕುಶಲಕರ್ಮಿಗಳಿಗೂ ಜಿಐ ಟ್ಯಾಗ್ ಪಡೆಯಲು ಹೇಗೆ ಹೋರಾಟ ಮಾಡಲಾಯಿತು ಎನ್ನುವುದನ್ನು ಖರ್ಗೆ ವಿವರಿಸಿದ್ದಾರೆ.
ಕೊಲ್ಹಾಪುರಿ ಚಪ್ಪಲಿಗಳನ್ನು ತಯಾರಿಸುವ ಹೆಚ್ಚಿನ ಕುಶಲಕರ್ಮಿಗಳು ಕರ್ನಾಟಕದ ಬೆಳಗಾವಿ, ಬಾಗಲಕೋಟೆ ಮತ್ತು ಧಾರವಾಡದ ಅಥಣಿ, ನಿಪ್ಪಾಣಿ, ಚಿಕ್ಕೋಡಿ, ರಾಯಬಗ್ ಮತ್ತಿತರ ಭಾಗಗಲ್ಲಿ ವಾಸಿಸುತ್ತಿದ್ದಾರೆ. ತಲೆತಲೆ ಮಾರುಗಳಿಂದ ಇವರು ಈ ಚಪ್ಪಲಿಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಕೊಲ್ಹಾಪುರ ಸೇರಿದಂತೆ ಸಮೀಪದ ಪಟ್ಟಣಗಳಲ್ಲಿ ಈ ಚಪ್ಪಲಿಗಳನ್ನು ಮಾರುತ್ತಾ ಬಂದಿದ್ದಾರೆ. ಕಾಲಾಂತರದಲ್ಲಿ ಕೊಲ್ಹಾಪುರವು ಈ ಚಪ್ಪಲಿಗೆ ಮುಖ್ಯ ಮಾರುಕಟ್ಟೆಯಾಗಿ ಹೋಯಿತು ಎಂದು ಪ್ರಿಯಾಂಕ್ ಖರ್ಗೆ ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.