ಉಡುಪಿ: ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ದೇಗುಲ ನಿರ್ಮಾಣವಾಗಿದ್ದು, ಕೋಟಿ ಕೋಟಿ ಹಿಂದುಗಳ ಕನಸು ನನಸಾಗಿದೆ. ಬಾಲರಾಮನ ದರ್ಶನ ಪಡೆದು ಭಕ್ತರು ಸಂತಸದಲ್ಲಿದ್ದಾರೆ. 25 ವರ್ಷ ಹಳೆಯದಾದ ಬೈಕ್‌ನಲ್ಲಿ ಉಡುಪಿಯಿಂದ 2,110 ಕಿ.ಮೀ ದೂರವಿರುವ ಅಯೋಧ್ಯೆಯ ಶ್ರೀರಾಮನ ದರ್ಶನ ಮಾಡಿದ ಅಪ್ಪ-ಮಗನಿಗೆ ಹದಿನಾಲ್ಕುವರೆ ಲಕ್ಷದ ಬೈಕ್ ಒಲಿದಿದೆ.
ಉಡುಪಿಯ ಕಾಪು ತಾಲೂಕಿನ ಶಿರ್ವ ನಿವಾಸಿ ಪ್ರಜ್ವಲ್ ಶೆಣೈ ಅವರು 25 ವರ್ಷದ ಹಳೆಯ ಬೈಕ್‌ನಲ್ಲಿ ಅಪ್ಪನನ್ನು ಕೂರಿಸಿಕೊಂಡು ದೇಶಾದ್ಯಂತ 50 ಸಾವಿರ ಕಿ.ಮೀ ಸುತ್ತಾಡಿದ್ದಾರೆ. ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್‌ನಲ್ಲಿ ಸುಮಾರು 17,982 ಅಡಿ ಎತ್ತರವಿರುವ ವಿಶ್ವದ ಎರಡನೇ ಅತಿ ಎತ್ತರದ ಪ್ರದೇಶವಾದ ಜಮ್ಮು ಕಾಶ್ಮೀರದ ಖರ್ದುಂಗ್ಲಾದಲ್ಲಿ ಕನ್ನಡ ಬಾವುಟ ಹಾರಿಸಿ ಕನ್ನಡಾಭಿಮಾನ ಮೆರೆದಿದ್ದ ಇವರಿಗೆ ಹೀರೋ ಕಂಪನಿ ಭರ್ಜರಿ ಗಿಫ್ಟ್ ನೀಡಿದೆ.
ಹೀರೋ ಮೋಟೋ ಕಾರ್ಪ್ ಸಂಸ್ಥೆಯು ಪ್ರಜ್ವಲ್ ಶೆಣೈ ಅವರಿಗೆ ಹೀರೋ ಸೆಂಟೆನ್ನಿಯಲ್ ಬೈಕ್ ನೀಡಿ ಗೌರವಿಸಿದೆ. ಹೀರೋ ಹೊಂಡಾ ಸ್ಪ್ಲೆಂಡರ್ ಆ ಕಾಲದ ಸೂಪರ್ ಬೈಕ್. ಮಧ್ಯಮ ವರ್ಗದ ಜನರ ಕನಸಿನ ಬೈಕಾಗಿತ್ತು. ಮೈಲೇಜ್, ಪರ್ಫಾಮೆನ್ಸ್ಗೆ ಸಾಟಿಯಿರಲಿಲ್ಲ. ಇದೆ ಬೈಕ್ ಏರಿ ತಂದೆ-ಮಕ್ಕಳು ದೇಶದ 17 ರಾಜ್ಯ ಪ್ರವಾಸ ಮಾಡಿದ್ದಾರೆ.
ಉಡುಪಿಯ ಶಕ್ತಿ ಶೋ ರೂಮ್ನಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡಿ, ಪ್ರಜ್ವಲ್ ಶೆಣೈ ಅವರಿಗೆ ಬೈಕ್ ಕೀ ಹಸ್ತಾಂತರಿಸಲಾಯಿತು. ಕೇಕ್ ಕಟ್ಟಿಂಗ್ ಮಾಡಿ ತಂದೆ ತಾಯಿಗೆ ಸಿಹಿ ಕೊಟ್ಟಾಗ ಬೈಕರ್ ಪ್ರಜ್ವಲ್ ಶೆಣೈ ಭಾವುಕರಾದರು.
ಅಯೋಧ್ಯೆಯ ಶ್ರೀರಾಮ ಮಂದಿರ, 9 ದಿನಗಳ ಅವಧಿಯಲ್ಲಿ ಸುಮಾರು 4 ಸಾವಿರ ಕಿ.ಮೀ. ಕ್ರಮಿಸಿ ಪ್ರಯಾಗ್‌ರಾಜ್ ತಲುಪಿ ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಸ್ಥಳಕ್ಕೆ ಬೈಕ್‌ನಲ್ಲಿ ತಂದೆ-ಮಗ ಹೋಗಿದ್ದರು. ಹೀರೋ ಮೋಟೋ ಕಾರ್ಪ್ ಸಂಸ್ಥಾಪಕ ಡಾ. ಬ್ರಿಜ್ ಮೋಹನ್‌ಲಾಲ್ ಮುಂಜಾಲ್ ಅವರ 101ನೇ ಜನ್ಮ ದಿನದ ಸವಿ ನೆನಪಿಗಾಗಿ ಈ ಸೆಂಟಿನಲ್ ಬೈಕ್ ತಯಾರಿಸಲಾಗಿದೆ. ಶೊರೂಮ್ ಮಾಲೀಕರಿಂದ 30 ಲಕ್ಷದವರೆಗೆ ಡಿಮಾಂಡ್ ಇರುವ 100 ಬೈಕ್‌ಗಳಲ್ಲಿ ಒಂದು ಬೈಕ್ ಉಚಿತವಾಗಿ ಪ್ರಜ್ವಲ್ ಪಾಲಾಗಿದೆ.
ಕಾಶ್ಮೀರ, ತಿರುಪತಿ, ಮಧುರೈ, ಕನ್ಯಾಕುಮಾರಿ, ಗೋವಾದ ಮಾರ್ದೋಳ್ ದೇಗುಲ, ಪುರಿಯ ಜಗನ್ನಾಥ ದೇವಾಲಯ, ಶಿರಡಿ, ನಾಸಿಕ್ ಪಂಡರಾಪುರಕ್ಕೆ ಸಕ್ಸಸ್ ರೈಡ್ ಮಾಡಿದ ಹಿನ್ನೆಲೆಯಲ್ಲಿ ಬೆಸ್ಟ್ ಕಸ್ಟಮರ್ ಅರ್ಹತೆಯ ರೂಪದಲ್ಲಿ ಗಿಫ್ಟ್ ಕೊಡಲಾಗಿದೆ.