ಕಲಬುರಗಿ: ಪರಿಸರದ ಮೇಲಿನ ಮಾನವನ ದಬ್ಬಾಳಿಕೆಯಿಂದ ಅನೇಕ ಗಿಡ-ಮರಗಳು, ಸಸ್ಯ ಸಂಪತ್ತು, ಪ್ರಾಣಿ-ಪಕ್ಷಿಗಳ ನಾಶವಾಗುವ ಮೂಲಕ ಪರಿಸರದ ಅಸಮತೋಲನವಾಗುತ್ತಿದೆ. ಜೀವ ವೈವಿಧ್ಯತೆ ಮತ್ತು ಆಹಾರ ಸರಪಳಿ ಪರಸ್ಪರ ಪೂರಕ ಸಂಬಂಧಿ, ಜೀವ ವೈವಿಧ್ಯತೆ ರಕ್ಷಣೆ ಮಾಡುವುದು ಅಗತ್ಯವಾಗಿದೆ, ಇದರಿಂದ ಪರಿಸರ ಸಮಲೋಲನೆ ಸಾಧ್ಯವಿದೆ ಎಂದು ಉಪನ್ಯಾಸಕ, ಪರಿಸರ ಪ್ರೇಮಿ ಎಚ್.ಬಿ ಪಾಟೀಲ ಹೇಳಿದರು.
ನಗರದ ಶಹಾಬಜಾರ ಮಹಾದೇವ ನಗರದ ಶಿವಾ ವಿದ್ಯಾ ಮಂದಿರ ಮತ್ತು ಸ್ವಾತಿ ಪ್ರೌಢಶಾಲೆಯಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಜರುಗಿದ ‘ಅಂತಾರಾಷ್ಟ್ರಿಮ ಜೀವವೈವಿಧ್ಯತೆ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀವವೈವಿಧ್ಯ ಸಮೃಧವಾಗಿರುವ ಸ್ಥಳಗಳನ್ನು ಸಂರಕ್ಷಿಬೇಕು. ಮಾನವ-ಪ್ರಾಣಿ ಸಂಘರ್ಷ ತಪ್ಪಿಸುವ ಕಾರ್ಯ ಜರುಗಬೇಕು. ಪ್ಲಾಸ್ಟಿಕ್, ರಸಗೊಬ್ಬರ, ಹಾನಿಕಾರಕ ರಾಸಾಯನಿಕಗಳ ಬಳಕೆ ತಗ್ಗಿಸುವುದು, ವಿವಿಧ ಮಾಲಿನ್ಯ ತಡೆಗಟ್ಟುವುದು, ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡುವುದು, ಸಾವಯುವ ಬೇಸಾಯ ಹೆಚ್ಚಳಗೊಳಿಸುವುದು, ಗಿಡ-ಮರಗಳು, ಪ್ರಾಣಿ-ಪಕ್ಷಿಗಳನ್ನು ಸಂರಕ್ಷಿಸುವುದು ಸೇರಿದಂತೆ ಮುಂತಾದ ಕ್ರಮ ಕೈಗೊಳ್ಳುವ ಮೂಲಕ ಜೀವ ವೈವಿಧ್ಯತೆ ಕಾಪಾಡಬಹುದಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ ಮಾತನಾಡಿ, ಜಗತ್ತಿನ ಸಕಲ ಜೀವರಾಶಿಗಳಿಗೆ ಪರಿಸರವೆ ಆವಾಸ ಸ್ಥಾನವಾಗಿದೆ. ಪರಿಸರ ವ್ಯವಸ್ಥೆಯಲ್ಲಿ ಪರಸ್ಪರ ಜೀವಿಗಳು ಪೂರಕವಾಗಿ ಸಂಬಂಧ ಹೊಂದಿರುತ್ತವೆ. ಪರಿಸರ ಸಮತೋಲನದಲ್ಲಿರಲು ಜೀವರಾಶಿಗಳ ಸಮತೋಲನವಾಗಿರಬೇಕು. ಪರಿಸರ ಸಂರಕ್ಷಣೆ ಎಲ್ಲರ ಹೊಣೆ ಎಂದರು.
ಕಾರ್ಯಕ್ರಮದಲ್ಲಿ ಯುವ ಸಮಾಜ ಸೇವಕ ಅಮರ ಜಿ.ಬಂಗರಗಿ, ಶಿಕ್ಷಕಿಯರಾದ ಪೂರ್ಣಿಮಾ ಪಾಟೀಲ, ಶಿಲ್ಪಾ ಖೇಡ್, ಪ್ರೀತಿ ಸಣಮನಿ, ಸೇವಕಿ ಸುನಿತಾ ಸೇರಿದಂತೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.