ಕಲಬುರಗಿ: ತಾಲೂಕಿನ ಬೋಧನ ಗ್ರಾಮವು ಪ್ರಾಚೀನ ಕಾಲದಲ್ಲಿ ‘ಸರಸ್ವತಿಪುರ’ ಎಂದು ನಾಡಿಗೆ ಚಿರಪರಿಚಿತವಾಗಿದೆ. ನಾಡಿಗೆ ಕನ್ನಡ ಭಾಷೆಯನ್ನು ಬೋಧಿಸಿದ ‘ಬೋಧನ’ ಗ್ರಾಮವಾಗಿದೆ ಎಂದು ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು.
ಆಳಂದ ತಾಲೂಕಿನ ಬೋಧನ ಗ್ರಾಮದ ಮಲ್ಲಿಕಾರ್ಜುನ ದೇವಾಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-14ರಲ್ಲಿ ಜರುಗಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮದ ಮಲ್ಲಿಕಾರ್ಜುನ ದೇವಾಲಯದಲ್ಲಿ ಪ್ರಾಚೀನ ಕಾಲದಲ್ಲಿ ಕನ್ನಡ ವಿಷಯ ಸೇರಿದಂತೆ ವಿವಿಧ ವಿಷಯ ಬೋಧಿಸಲಾಗುತ್ತಿತ್ತು. ಅದಕ್ಕಾಗಿ ಈ ಗ್ರಾಮಕ್ಕೆ ‘ಬೋಧನ’ ಎಂಬ ಉಪನಾಮ ಪಡೆದಿದೆ. ಆಳಂದ ಸಾಸಿರ ನಾಡಿನ ವ್ಯಾಪ್ತಿಯ ಈ ಶಿಕ್ಷಣ ಕೇಂದ್ರಕ್ಕೆ ಕಲ್ಯಾಣ ಚಾಲುಕ್ಯರ ಜಗದೇಕಮಲ್ಲನ ಪತ್ನಿ ಮಲಯವತಿ ಭೂದತ್ತಿಯನ್ನು ಬಿಟ್ಟ ಉಲ್ಲೇಖವು ಕ್ರಿ.ಶ 1143ರ ಶಾಸನ ಉಲ್ಲೇಖಿಸಿದೆ. ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಪ್ರತಿಯೊಬ್ಬರೂ ಕಾಳಜಿವಹಿಸಬೇಕು. ಜಗತ್ತಿಗೆ ವಿದ್ಯಾದಾನ ನೀಡಿದ ಬೋಧನ ಗ್ರಾಮದ ಸ್ಮಾರಕಗಳು ಕನ್ನಡ ನಾಡಿನ ಇತಿಹಾಸ ಸಾರುತ್ತವೆ ಎಂದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ಇಂದಿನ ಪೀಳಿಗೆಗೆ ಐತಿಹಾಸಿಕ ಪ್ರಜ್ಞೆ ಜಾಗೃತಗೊಳಿಸಿ, ಸ್ಮಾರಕಗಳ ರಕ್ಷಿಸುವ ಕಾರ್ಯ ನಿರಂತರವಾಗಿ ಮಾಡಲಾಗುತ್ತಿದೆ. ಅಳಿವಿನ ಅಂಚಿನಲ್ಲಿರುವ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಡಾ.ರಾಜಶೇಖರ ಪಾಟೀಲ, ಗ್ರಾಪಂ ಸದಸ್ಯ ಪ್ರಕಾಶ ಸಿ.ನರೋಣಿ, ಗ್ರಾಮಸ್ಥರಾದ ಶಂಭಯ್ಯ ಸ್ವಾಮಿ, ಮಲ್ಲಿಕಾರ್ಜುನ ಕಾಂದೆ, ಶರಣಗೌಡ ಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ಬಸವರಾಜ ಪಗಡೆ, ಚನ್ನಬಸವ ಡಿಗ್ಗಿ, ಮಲ್ಲಿನಾಥ ಮಾಲಿಪಾಟೀಲ, ಮಂಜುನಾಥ ಗುಬ್ಬೇವಾಡ, ಹಣಮಂತರಾಯ ಪೂಜಾರಿ, ಶರಣಬಸಪ್ಪ ಸಂಗೋಳಗಿ, ಕೈಲಾಸ ಮಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.