ಶಂಕರ್ ಜಿ ಹಿಪ್ಪರಗಿಗೆ ನಾಟಕ ಅಕಾಡೆಮಿ ಪ್ರಶಸ್ತಿ

ಸುದ್ದಿ ಸಂಗ್ರಹ

ಕಲಬುರ್ಗಿ: ನಾಟಕಕಾರ ಶಂಕರ್ ಜಿ ಹಿಪ್ಪರಗಿ ಅವರನ್ನು 2023 – 24ನೇ ಸಾಲಿನ ಮಾಲತಿಶ್ರೀ ಮೈಸೂರು ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ನಾಟಕ ಅಕಾಡೆಮಿಯ ದತ್ತಿ ಪ್ರಶಸ್ತಿಗೆ ಪ್ರಥಮ ಬಾರಿಗೆ ಆಯ್ಕೆಯಾದ ಹೆಗ್ಗಳಿಕೆಗೆ ಶಂಕರ್ ಜಿ ಹಿಪ್ಪರಗಿ ಪಾತ್ರರಾಗಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನ ಬಾಗೆವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದವರಾದ ಇವರು 35 ವರ್ಷಗಳಿಂದ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಚಂದಾಪುರದಲ್ಲಿ ನೆಲೆಸಿದ್ದಾರೆ.

25ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ ಬಹುಮುಖ ಪ್ರತಿಭೆಯ ಇವರು 25ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಶಂಕರ್ ಜಿ ಅವರಿಗೆ ತಾಳಿ ಹರಿಯಲಿಲ್ಲ ಶೀಲ ಉಳಿಯಲಿಲ್ಲ, ಕೆಂಡ ಕಾರಿದ ಕನ್ಯ, ಜಿಲ್ಲಾಧಿಕಾರಿ, ದ್ವೇಷ ಅಳಿಸಬೇಕು ದೇಶ ಉಳಿಯಬೇಕು ಸೇರಿದಂತೆ ಮೊದಲಾದ ನಾಟಕಗಳು ಪ್ರಖ್ಯಾತಿ ಪಡೆದಿವೆ.

ಅಭಿನಂದನೆಯ ಮಹಾಪೂರ ಕರ್ನಾಟಕ ಅಕಾಡೆಮಿಯ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಶಂಕರ್ ಜಿ ಹಿಪ್ಪರಗಿ ಅವರಿಗೆ ಕಸಾಪ ಮಾಜಿ ಅಧ್ಯಕ್ಷ ಅಶೋಕ ಪಾಟೀಲ, ನಾಟಕಕಾರ ಎಸ್.ಎನ್ ದಂಡಿನಕುಮಾರ, ಕವಯಿತ್ರಿ ಜ್ಯೋತಿ ಬೊಮ್ಮಾ, ಶಿಕ್ಷಕ ರಾಜಶೇಖರ ಮುಸ್ತಾರಿ, ಪತ್ರಕರ್ತರಾದ ಪ್ರಶಾಂತಗೌಡ ಪಾಟೀಲ ತೆಂಗಳಿ, ಜಗನ್ನಾಥ ಶೇರಿಕಾರ, ಉಮಾ ಪಾಟೀಲ, ರಂಗಭೂಮಿ ಕಲಾವಿದರಾದ ರೇವಣಸಿದ್ದಯ್ಯ ಸ್ವಾಮಿ, ಶಾಮರಾವ ಕೊರವಿ, ಚಂದ್ರಶೇಖರ ಲಕಶೆಟ್ಟಿ, ಮಲ್ಲಯ್ಯ ಸ್ವಾಮಿ ಹಸಿರಗುಂಡಗಿ, ಪ್ರಮುಖರಾದ ಲಕ್ಷ್ಮಣ ಅವುಂಟಿ, ಜಗನ್ನಾಥ ಕಟ್ಟಿ ಸೇರಿದಂತೆ ಮೊದಲಾದವರು ಅಭಿನಂದಿಸಿದರು.

ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ ನಾಗರಾಜ ಮೂರ್ತಿ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *