ಚಿತ್ತಾಪುರ: ತಾಲೂಕಿನಲ್ಲಿ ಬಾಲ್ಯ ವಿವಾಹ ಪ್ರಕರಣ ಜರುಗದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರಾಜಕುಮಾರ ರಾಠೋಡ ಹೇಳಿದರು.
ಪಟ್ಟಣದ ಸಿಡಿಪಿಒ ಕಚೇರಿಯಲ್ಲಿ ಮೇಲ್ವಿಚಾರಕರ ಸಭೆ ನಡೆಸಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರು ಮಕ್ಕಳ ಹಾಗೂ ಮಹಿಳೆಯರ ಬಗ್ಗೆ ಹೆಚ್ವಿನ ಕಾಳಜಿ ವಹಿಸುತ್ತಾರೆ. ಹೀಗಾಗಿ ತಾಲೂಕಿನಲ್ಲಿ ಯಾವುದೆ ರೀತಿಯ ಬಾಲ್ಯ ವಿವಾಹ ನಡೆಯದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಮೇಲ್ವಿಚಾರಕರಿಗೆ ಸೂಚಿಸಿದರು.
ಕೆಡಿಪಿ ಗುರಿಗೆ ತಕ್ಕಂತೆ ಪೋಷಣಾ ಟ್ರ್ಯಾಕ್’ನಲ್ಲಿರುವ ಫಲಾನುಭವಿಗಳ ನೊಂದಣಿ, ಆಧಾರ ಪರಿಶೀಲನೆ ಮಾಡಬೇಕು. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ನಿಗದಿ ಪಡಿಸಿದ ಗುರಿಗೆ ತಕ್ಕಂತೆ ಪ್ರಗತಿ ಸಾಧಿಸಬೇಕು ಎಂದರು.
ಸಭೆಯ ನಂತರ ಪಟ್ಟಣದ ವಚವಚ ಗಲ್ಲಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ದಾಖಲಾತಿಗಳನ್ನು ಪರೀಶಿಲನೆ ಮಾಡಿದರು. ಬಾಹರಪೇಟ್ ಏರಿಯಾದಲ್ಲಿ 2022 – 23ನೇ ಸಾಲಿನ ಕೆ.ಕೆ.ಆರ್.ಡಿ.ಬಿ ಮೇಗಾ ಮ್ಯಾಕ್ರೋ ಯೋಜನೆಯ ಮೊದಲನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ಬಾಹಾರ್ ಪೇಠದ ಎರಡನೇ ಅಂಗನವಾಡಿ ಕೇಂದ್ರದ ಕಟ್ಟಡ ಕಾಮಗಾರಿ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ. ವಿಜಯಲಕ್ಷ್ಮಿ ಹೆರೂರ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರತಿ ತುಪ್ಪದ, ಹಿರಿಯ ಮೇಲ್ವಿಚಾರಕಿಯರು, ವಲಯ ಮೇಲ್ವಿಚಾರಕಿಯರು ಸೇರಿದಂತೆ ಅನೇಕರು ಇದ್ದರು.