ಕಲಬುರಗಿ: ಹೋಮಿಯೋಪಥಿಯು ಯಾವುದೆ ಅಡ್ಡಪರಿಣಾಮಗಳಿಲ್ಲದ, ಬಹುತೇಕ ಎಲ್ಲಾ ಕಾಯಿಲೆಗಳಿಗೆ ಸೂಕ್ತ ಪರಿಣಾಮಕಾರಿ ಚಿಕಿತ್ಸೆ ಹೊಂದಿರುವ, ರೋಗ ಮುಕ್ತತೆ ಹೊಂದಿ ಜೀವನ ನಿರ್ವಹಣೆಗೆ ಪೂರಕವಾದ ವಿಶೇಷ ಚಿಕಿತ್ಸಾ ವಿಧಾನವಾಗಿದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವದು ಪ್ರಸ್ತುತ ದಿನಗಳಲ್ಲಿ ಹೆಚ್ಚು ಅಗತ್ಯವಾಗಿದೆ ಎಂದು ಹೋಮಿಯೋಪಥಿ ತಜ್ಞ ವೈದ್ಯ ಡಾ.ಮಂಜುನಾಥ ಬಿ ಪವಾಡಶೆಟ್ಟಿ ಅಭಿಮತಪಟ್ಟರು.
ನಗರದ ಆಳಂದ ಚೆಕ್ ಪೋಸ್ಟ್ ಸಮೀಪದ ಬಸವೇಶ್ವರ ಕ್ಲಿನಿಕ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಗುರುವಾರ ಜರುಗಿದ ‘ವಿಶ್ವ ಹೋಮಿಯೋಪಥಿ ದಿನಾಚರಣೆ’ಯನ್ನು ‘ಹೋಮಿಯೋಪಥಿ ಪದ್ದತಿಯ ಪಿತಾಮಹ’ ಡಾ.ಹ್ಯಾನಮನ್ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಹೋಮಿಯೋಪಥಿ ಚಿಕಿತ್ಸೆ ಡಾ.ಹ್ಯಾನಮನ್ ಅವರ ದೀರ್ಘ ಸಂಶೋಧನೆಯ ಫಲವಾಗಿ 1756ರಲ್ಲಿ ಪದ್ಧತಿ ಉದಯವಾಗಿದೆ. ಹೋಮಿಯೋಪಥಿ ವಿಧಾನವು ನಿಧಾನ ಮತ್ತು ದೀರ್ಘಾವಧಿ, ಸಂಪೂರ್ಣ ಚಿಕಿತ್ಸೆ ಅಸಾಧ್ಯ, ಅಡ್ಡಪರಿಣಾಮಗಳಿಂದ ಮುಕ್ತವಾಗಿಲ್ಲ ಎಂಬ ಕೆಲವು ತಪ್ಪು ಕಲ್ಪನೆಗಳಿವೆ. ‘ಸಾಮ್ಯವು-ಸಾಮ್ಯವನ್ನು ಗುಣಪಡಿಸುತ್ತದೆ’ ಎಂಬ ತತ್ವ ಇದರಲ್ಲಿ ಒಳಗೊಂಡಿದೆ. ಅಂದರೆ ಯಾವುದು ರೋಗ ಉಂಟುಮಾಡುತ್ತದೆಯೋ, ಅದನ್ನೇ ಔಷಧಿಯನ್ನಾಗಿ ಶಾಸ್ತ್ರಿಯವಾಗಿ ರೋಗಿಯ ಮೇಲೆ ಪ್ರಯೋಗಿಸುವ ಮೂಲಕ ಸಂಪೂರ್ಣ ಚಿಕಿತ್ಸೆಯನ್ನು ಮಾಡುವ ಗುಣ ಹೋಮಿಯೋಪಥಿ ಹೊಂದಿದೆ ಎಂದರು.
ಹೋಮಿಯೋಪಥಿ ಪದ್ಧತಿಯ ಬಗ್ಗೆ ಅಪನಂಬಿಕೆ ಮೂಡುವಂತಹ ಕೆಲಸವಾಗಬಾರದು ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ ಪಾಟೀಲ, ಸದಸ್ಯರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಮಹಾದೇವಪ್ಪ ಎಚ್.ಬಿರಾದಾರ, ಜೀನೇಂದ್ರ ಸಾಗರಶೆಟ್ಟಿ, ದರ್ಶನ್, ಪ್ರಮುಖರಾದ ಮಲ್ಲಯ್ಯ ಸ್ವಾಮಿ, ಪ್ರಶಾಂತ ಶಹಾಪುರೆ, ತುಕಾರಾಮ ಜಮಾದಾರ, ಆಕಾಶ ಬಂಗರಗಿ ಸೇರಿದಂತೆ ಅನೇಕರು ಇದ್ದರು.