ಕಲಬುರಗಿ: ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಮಾನವಾದ ಅವಕಾಶ ಒದಗಿಸಿಕೊಡುವ ಪರಿಕಲ್ಪನೆಯೇ ಸಾಮಾಜಿಕ ನ್ಯಾಯವಾಗಿದ್ದು, ಇದರಿಂದ ಸದೃಢ ರಾಷ್ಟ್ರ ನಿರ್ಮಾಣವಾಗಲು ಸಾಧ್ಯವಿದೆ ಎಂದು ಉಪನ್ಯಾಸಕ, ಸಾಮಾಜಿಕ ಚಿಂತಕ ಎಚ್.ಬಿ ಪಾಟೀಲ ಹೇಳಿದರು.
ನಗರದ ಗಂಗಾ ನಗರದಲ್ಲಿರುವ ವಿವೇಕಾನಂದ ಪ್ರೌಢ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಜರುಗಿದ ‘ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನಿನ ಮುಂದೆ ಎಲ್ಲರೂ ಸರಿಸಮಾನರು. ಜಾತಿ, ಧರ್ಮ, ಭಾಷೆ, ಪ್ರಾಂತ್ಯ, ಲಿಂಗದಂತಹ ಮುಂತಾದ ಅಂಶಗಳ ಮೇಲೆ ಯಾವುದೆ ರೀತಿಯ ತಾರತಮ್ಯ ಮಾಡದೆ ಎಲ್ಲರೂ ಸರಿಸಮಾನರೆಂದು ಭಾವಿಸುವದಾಗಿದೆ ಎಂದರು.
ಲಿಂಗ, ವಯಸ್ಸು, ಜನಾಂಗೀಯ, ಧರ್ಮ, ಸಂಸ್ಕೃತಿ, ಬಡತನ, ನಿರುದ್ಯೋಗ, ಶಿಕ್ಷಣ, ವಲಸೆಯಂತಹ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸಿ, ಸರ್ವರಿಗೂ ಸಮಾನ ಅವಕಾಶ, ಉದ್ಯೋಗ, ರೈತರ ಏಳ್ಗೆಯ ಮೂಲಕ ಸಾಮಾಜಿಕ ಅಸಮಾನತೆ ಹೋಗಲಾಡಿಸುವದು ಸಾಮಾಜಿಕ ನ್ಯಾಯದ ಉದ್ದೇಶವಾಗಿದೆ. ಇದು ರಾಷ್ಟ್ರಗಳ ಒಳಗೆ ಶಾಂತಿಯುತ ಮತ್ತು ಸಮೃದ್ಧ ಸಹಬಾಳ್ವೆಗೆ ಆಧಾರವಾಗಿರುವ ತತ್ವವಾಗಿದೆ. ಸಾಮಾಜಿಕ ನ್ಯಾಯಕ್ಕಾಗಿ ಬುದ್ಧ-ಬಸವ- ಅಂಬೇಡ್ಕರ್ ಅವರ ಕೊಡುಗೆ ಮರೆಯುವಂತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್ ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಗುಡಬಾ, ಶಿಕ್ಷಕಿಯರಾದ ರೂಪಾ ಚೇಂಗಟಿ, ಅರ್ಚನಾ ಕುಲಕರ್ಣಿ, ಕಾವೇರಿ ವಿ ಹೊನ್ನಳ್ಳಿ, ಶೃತಿ ಬಿ ಕುಲಕರ್ಣಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.