ಸುದ್ದಿ ಸಂಗ್ರಹ ವಾಡಿ
ಭೀಮಾ ನದಿ ತೀರದ ಪುಣ್ಯಕ್ಷೇತ್ರ, ತ್ರೇತಾಯುಗದ ಐತಿಹಾಸಿಕ ಹಿನ್ನೆಲೆಯುಳ್ಳ ಪಟ್ಟಣದ ಸಮೀಪವಿರುವ ಕುಂದನೂರು ಗ್ರಾಮದ ಕಾಳಿಕಾದೇವಿ ದೇವಸ್ಥಾನದಲ್ಲಿ ನ.20 ರಿಂದ 24ರ ವರೆಗೆ 5 ದಿನಗಳ ಭವ್ಯ ಧಾರ್ಮಿಕ ಉತ್ಸವ, ದೇವಿ ಪುರಾಣ, ಮಹಾಚಂಡಿ ಯಜ್ಞ ಮತ್ತು ದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಶ್ವಕರ್ಮ ಸಮಾಜ ಹಾಗೂ ಕಾಳಿಕಾದೇವಿ ಕ್ಷೇತ್ರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಪಂಚಾಳ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವಕರ್ಮ ಸಮಾಜದ ವತಿಯಿಂದ ಶ್ರದ್ಧಾ ಭಕ್ತಿಯಿಂದ ಉತ್ಸವ ಹಮ್ಮಿಕೊಳ್ಳಲಾಗಿದೆ. ಕಲಬುರಗಿ ನಗರದ ಏಕದಂಡಗಿ ಮಠದ ಪೂಜ್ಯ ಶ್ರೀ ಸುರೇಂದ್ರ ಮಹಾಸ್ವಾಮಿಜಿ ಅವರ ದಿವ್ಯ ಸಾನಿಧ್ಯದಲ್ಲಿ ಸತತ ಐದು ದಿನಗಳ ಕಾಲ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ. ಪ್ರತಿನಿತ್ಯ ಸಂಜೆ 7:30 ಗಂಟೆಗೆ ಹಸನಾಪುರದ ಮಲ್ಲಿಕಾರ್ಜುನ ಶಾಸ್ತ್ರಿ ಅವರಿಂದ ‘ದೇವಿ ಪುರಾಣ’ ಪ್ರವಚನ ನಡೆಯಲಿದೆ.
ಉತ್ಸವದ ಪ್ರಮುಖ ಆಕರ್ಷಣೆಗಳು
ನ.23 ರಂದು ಸಾಮೂಹಿಕ ಉಪನಯನ ಮತ್ತು ಸನ್ಮಾನ
ಅಂದು ಬೆಳಗ್ಗೆ 10 ಗಂಟೆಗೆ ವಿಶ್ವಕರ್ಮ ಸಮಾಜದ ವಟುಗಳಿಗೆ ಸಾಮೂಹಿಕ ಉಪನಯನ ಸಂಸ್ಕಾರ ನೆರವೇರಲಿದೆ. ಇದೆ ವೇಳೆ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ, ಸಾಧನೆ ಮಾಡಿದ ಸುಪ್ರಸಿದ್ಧ ದಂತ ವೈದ್ಯ ಡಾ. ಗುರುರಾಜ ಅರಿಕೇರಿ, ಸುಪ್ರಸಿದ್ಧ ಅರವಳಿಕೆ ತಜ್ಞ ಡಾ.ಮೌನೇಶ್ವರ ಕೊಪ್ಪದ ಹಾಗೂ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಶಕ್ತಿ ಕೊಪ್ಪದ್ ಅವರಿಗೆ ಸನ್ಮಾನಿಸಿ ಗೌರವಿಸಲಾಗುವುದು.
ನ. 24 ರಂದು ಮಹಾಚಂಡಿ ಯಜ್ಞ ಮತ್ತು ದೀಪೋತ್ಸವ
ಉತ್ಸವದ ಸಮಾರೋಪ ದಿನವಾದ ನವೆಂಬರ್ 24 ರಂದು ಲೋಕಕಲ್ಯಾಣಾರ್ಥವಾಗಿ ಮಹಾಚಂಡಿ ಯಜ್ಞ ಹಾಗೂ ಸಂಜೆ ದೇಗುಲದ ಆವರಣದಲ್ಲಿ ಕಣ್ಮನ ಸೆಳೆಯುವ ದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ.
ಹರ-ಗುರು ಚರಮೂರ್ತಿಗಳ ದಿವ್ಯ ಸಾನಿಧ್ಯ
ಈ ಐತಿಹಾಸಿಕ ಉತ್ಸವಕ್ಕೆ ಸೌಹಾರ್ದತೆಯ ಸಂಕೇತವಾಗಿ ವಿವಿಧ ಮಠಾಧೀಶರು ಮತ್ತು ಧರ್ಮಗುರುಗಳು ಸಾಕ್ಷಿಯಾಗಲಿದ್ದಾರೆ. ಆಳ್ಳೊಳ್ಳಿಯ ನಾಗಯ್ಯ ಸ್ವಾಮಿಜಿ, ರಾವೂರಿನ ಸಿದ್ಧಲಿಂಗ ಸ್ವಾಮಿಜಿ, ಹಳಕರ್ಟಿಯ ಹಜರತ್ ಮೌಲಾನಾ ಸೈಯದ್ ಹುಸೇನಿ ಪೀರಾ ಶಾ ಖಾದ್ರಿ ಮತ್ತು ರಾಜಶೇಖರ ಸ್ವಾಮಿಜಿ ಸೇರಿದಂತೆ ಈ ಭಾಗದ ಪ್ರಮುಖ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಜೊತೆಗೆ ಕ್ಷೇತ್ರದ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಸಾಹಿತಿಗಳು, ಕವಿಗಳು ಮತ್ತು ಕಲಾವಿದರು ಭಾಗವಹಿಸಲಿದ್ದಾರೆ.
ಕ್ಷೇತ್ರದ ಪೌರಾಣಿಕ ಮಹತ್ವ
ಭೀಮಾ ನದಿ ದಡದಲ್ಲಿರುವ ಕಾಳಿಕಾದೇವಿ ದೇಗುಲವು ತ್ರೇತಾಯುಗದಲ್ಲಿ ಸ್ಥಾಪನೆಯಾಗಿದೆ ಎಂಬ ಪ್ರತೀತಿ ಇದೆ, ಅನೇಕ ಋಷಿ-ಮುನಿಗಳು ತಪಸ್ಸು ಮಾಡಿದ ಪವಿತ್ರ ತಾಣವಾಗಿದೆ. ಜಾಗೃತ ಶಕ್ತಿ ಪೀಠವಾಗಿರುವ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಈ ಬಾರಿಯ ಉತ್ಸವದಲ್ಲಿಯೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಸಂಸ್ಥೆಯ ಅಧ್ಯಕ್ಷ ಬಸವರಾಜ ಪಂಚಾಳ ಪತ್ರಿಕಾ ಗೋಷ್ಠಿಯಲ್ಲಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮುಖಂಡರಾದ ದೇವೇಂದ್ರ ಬಡಿಗೇರ ಹಲಕರ್ಟಿ, ಸಿದ್ಧು ಪಂಚಾಳ, ಅರ್ಜುನ ಪಂಚಾಳ, ಸುನೀಲ ಪಂಚಾಳ, ಮಾಣಿಕ ವಿಶ್ವಕರ್ಮ, ಸುಭಾಷ ಪಂಚಾಳ, ಮಾಣಿಕ ವಿಶ್ವಕರ್ಮ ಮತ್ತು ಬಾಬಾ ಖಾನ ಇದ್ದರು.