ಹಣ ದುರುಪಯೋಗ: ಫೈನಾನ್ಸ್ ಮ್ಯಾನೇಜರ್ ವಿರುದ್ಧ ಎಫ್ಐಆರ್
ಸುದ್ದಿ ಸಂಗ್ರಹ ಚಿತ್ತಾಪುರ
ಪಟ್ಟಣದಲ್ಲಿರುವ ಸ್ಪಂದನಾ ಸ್ಫೂರ್ತಿ ಫೈನಾನ್ಸ್ನಲ್ಲಿ ಸಾಲ ಪಡೆದ ಗ್ರಾಹಕರು ಪಾವತಿ ಮಾಡಿದ ಸಾಲದ ಕಂತಿನ ಹಣ ಬ್ಯಾಂಕಿನ ಖಾತೆಗೆ ಜಮಾ ಮಾಡದೆ 6,36,344 ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಈ ಹಿಂದೆ ಫೈನಾನ್ಸ್ನ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ ನಾಗೇಂದ್ರಪ್ಪ ತೆಲ್ಲೂರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶನಿವಾರ ರಾತ್ರಿ ಎಫ್ಐಆರ್ ದಾಖಲಾಗಿದೆ.
ಪ್ರಕರಣದ ವಿವರ: ‘ಹೆಣ್ಣುಮಕ್ಕಳ ಏಳಿಗೆಯ ಹಿತದೃಷ್ಟಿಯಿಂದ ಆರ್ಬಿಐ ಪರವಾನಗಿ ಅಡಿಯಲ್ಲಿ ಸ್ಪಂದನಾ ಸ್ಫೂರ್ತಿ ಫೈನಾನ್ಸ್ನಿಂದ ಕಂತಿನ ಆಧಾರದಲ್ಲಿ ಮರುಪಾವತಿಸಲು ಕಿರುಸಾಲಗಳನ್ನು ನೀಡಲಾಗುತ್ತದೆ. ಅದರಂತೆ ಒಬ್ಬರಿಗೆ ತಲಾ ₹ 1.25 ಲಕ್ಷ ಸಾಲ ಕೊಡಲಾಗುತ್ತದೆ’ ಎಂದು ಈಗಿರುವ ಮ್ಯಾನೇಜರ್ ವಿಠಲ್ ಬಾಬುರಾವ ಬನಹಳ್ಳಿ ಶನಿವಾರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
‘5 ತಿಂಗಳ ಹಿಂದೆ ಪಡೆದಿರುವವರಿಗೆ ಸಾಲದ ಕಂತು ಪಾವತಿಸುವಂತೆ ಮನೆಗಳಿಗೆ ತೆರಳಿ ಕೇಳಿದ್ದೇವೆ. ಕಂತಿನ ಹಣವನ್ನು ಮ್ಯಾನೇಜರ್ ಮಲ್ಲಿಕಾರ್ಜುನ ಹತ್ತಿರ ಪಾವತಿಸಿರುವುದಾಗಿ ಹಾಗೂ ತಮ್ಮ ಯಾವ ತಿಂಗಳ ಕಂತು ಬಾಕಿ ಇರುವುದಿಲ್ಲ’ ಎಂದು ಗ್ರಾಹಕರು ತಿಳಿಸಿದ್ದಾರೆ.
‘ಬ್ಯಾಂಕಿಗೆ ಬಂದು ಗ್ರಾಹಕರ ಖಾತೆ ಪರಿಶೀಲಿಸಿದಾಗ ಕಂತಿನ ಹಣ ಪಾವತಿಸರುವುದು ಪತ್ತೆಯಾಗಿದೆ. ಮಲ್ಲಿಕಾರ್ಜುನ ಅವರು 2024ರ ನ.21 ರಿಂದ 2026ರ ಜೂ.7ರವರೆಗೆ 36 ಗ್ರಾಹಕರು ಪಾವತಿಸಿರುವ ₹6.36 ಲಕ್ಷ ಹಣ ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ಠಾಣೆಗೆ ದೂರು ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಸಾಲದ ಕಂತಿನ ಹಣ ಮೋಸದಿಂದ ತೆಗೆದುಕೊಂಡಿರುವ ಕುರಿತು ಬ್ಯಾಂಕಿನ ಮೇಲಧಿಕಾರಿಗಳಿಗೆ ವಿಷಯ ತಿಳಿಸಿದಾಗ ಅಧಿಕಾರಿಗಳ ತಂಡವು ಬ್ಯಾಂಕಿಗೆ ಬಂದು ಪರಿಶೀಲಿಸಿದ ವೇಳೆ ಪ್ರಕರಣ ಬಯಲಿಗೆ ಬಂದಿದೆ. ವಿಠಲ್ ಅವರು ನೀಡಿರುವ ದೂರು ಆಧರಿಸಿ ಮಲ್ಲಿಕಾರ್ಜುನ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.