ಸುದ್ದಿ ಸಂಗ್ರಹ ಶಹಾಬಾದ್
ಅಜ್ಞಾನವೆಂಬ ಕತ್ತಲೆಯನ್ನು ಕಳೆದು ಜ್ಞಾನವೆಂಬ ಬೆಳಕನ್ನು ಪಸರಿಸುವ ಹಬ್ಬವೇ ದೀಪಾವಳಿ ಎಂದು ಶಿಕ್ಷಣ ಪ್ರೇಮಿ ವಿಜಯಕುಮಾರ ಮುತ್ತಟ್ಟಿ ಹೇಳಿದರು.
ನಗರದ ಸಂತ ಥಾಮಸ ಶಾಲೆಯಲ್ಲಿ ನಡೆದ ದೀಪಾವಳಿ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನಸ್ಸಿನ ಅಜ್ಞಾನ, ದ್ವೇಷ ಮತ್ತು ಕತ್ತಲೆಯನ್ನು ಕಳೆದು ಜ್ಞಾನ, ಪ್ರೀತಿ, ಮತ್ತು ಸಮೃದ್ಧಿಯ ಬೆಳಕನ್ನು ತುಂಬುವ ಆಧ್ಯಾತ್ಮಿಕ, ಸಾಂಸ್ಕೃತಿಕ ಪರ್ವವಾಗಿದೆ. ವಿದ್ಯಾರ್ಥಿಗಳು ಸಕಾರಾತ್ಮಕತೆಯಿಂದ ಸಾಧನೆ ಮಾಡಬೇಕು ಎಂದರು.
ಶಾಲೆಯ ಮುಖ್ಯಸ್ಥ ಪಾದರ ಜಿರಾಲ್ಡ್ ಸಾಗರ ಮಾತನಾಡಿ, ಬೆಳಕಿನ ಹಬ್ಬ ದೀಪಾವಳಿ. ಇದು ಅಜ್ಞಾನವೆಂಬ ಕತ್ತಲೆಯನ್ನು ಕಳೆದು, ಜ್ಞಾನವೆಂಬ ಬೆಳಕನ್ನು ಪಸರಿಸುವ ಸಂಕೇತವಾಗಿದೆ. ಕೆಡುಕಿನ ಮೇಲೆ ಒಳಿತು ಸಾಧಿಸಿದ ವಿಜಯವನ್ನು ಈ ಹಬ್ಬ ಸಾರುತ್ತದೆ. ನಾವೆಲ್ಲರೂ ಹಣತೆಗಳನ್ನು ಹಚ್ಚುವ ಮೂಲಕ ಪರಿಸರ ಸ್ನೇಹಿ ‘ಹಸಿರು ದೀಪಾವಳಿ’ ಆಚರಿಸೋಣ ಎಂದರು.
ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ವಾಸುದೇವ ಚವ್ಹಾಣ್ ಮಾತನಾಡಿದರು.
ವಿದ್ಯಾರ್ಥಿಗಳು ದೀಪಾವಳಿಯ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯ ಕುರಿತು ಭಾಷಣ ಮಾಡಿದರು.
ವೀರಶೈವ ಸಮಾಜದ ಅಧ್ಯಕ್ಷ ಭೀಮಾಶಂಕರ ಕುಂಬಾರ, ಮುಖ್ಯಗುರು ಕಾಣಿಕ್ಯ ಮೆರಿ, ನಗರಸಭೆ ಮಾಜಿ ಸದಸ್ಯೆ ಸಾಬೇರಾ ಬೇಗಂ, ಮುಖಂಡರಾದ ರಮೇಶ ಅಸ್ಟಿಕರ ಮತ್ತು ನಿತೀನ ಪುಲಸೆ ವೇದಿಕೆ ಮೇಲಿದ್ದರು.
ಬೆಳಕಿನ ಹಬ್ಬ ದೀಪಾವಳಿ ಅತ್ಯಂತ ಸಂಭ್ರಮ, ಸಡಗರ ಮತ್ತು ಪರಿಸರ ಸ್ನೇಹಿಯಾಗಿ ಆಚರಿಸಲಾಯಿತು. ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಈ ಹಬ್ಬದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ವಿವಿಧ ಧರ್ಮ ಗ್ರಂಥಗಳ ಮಹತ್ವ ತಿಳಿಸಲಾಯಿತು.
ಕಾರ್ಯಕ್ರಮದ ನಿಮಿತ್ತ ಶಾಲೆಯ ಆವರಣವನ್ನು ತಳಿರು ತೋರಣ, ಬಣ್ಣ ಬಣ್ಣದ ರಂಗೋಲಿ ಮತ್ತು ಹೂವುಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳು ಹಾಡಿದ
ಭಕ್ತಿಗೀತೆಗಳು ಮತ್ತು ನೃತ್ಯ ಪ್ರದರ್ಶನಗಳು ಎಲ್ಲರ ಮನಸೂರೆಗೊಂಡವು.
ವಿಶೇಷವಾಗಿ, ವಿದ್ಯಾರ್ಥಿಗಳಿಗಾಗಿ ‘ಮಣ್ಣಿನ ಹಣತೆ ಅಲಂಕಾರ’ ಮತ್ತು ‘ರಂಗೋಲಿ ಸ್ಪರ್ಧೆ’ ಏರ್ಪಡಿಸಲಾಗಿತ್ತು. ಮಕ್ಕಳು ತಮ್ಮ ಸೃಜನಶೀಲತೆಯನ್ನು ಬಳಸಿ ಸುಂದರವಾದ ಹಣತೆಗಳನ್ನು ತಯಾರಿಸಿ ಪ್ರದರ್ಶಿಸಿದರು.
ಕಾರ್ಯಕ್ರಮವನ್ನು ನಂದಿನಿ ನಿರೂಪಿಸಿದರು, ರೂಪಾ ಸ್ವಾಗತಿಸಿದರು ಮತ್ತು ಶಿವಾನಿ ವಂದಿಸಿದರು.