ಸುದ್ದಿ ಸಂಗ್ರಹ ಕಲಬುರಗಿ
ಪ್ರಧಾನಿ ನರೇಂದ್ರ ಮೋದಿ ಬರಿ ಮಾತಿನ ಮಲ್ಲ, ಅವರಿಗೆ ಜನರ ಕಾಳಜಿ ಇಲ್ಲ. ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್, ಸಿಲಿಂಡರ್ ದರ ದಿನದಿಂದ ದಿನಕ್ಕೆ ಜಾಸ್ತಿ ಮಾಡುತ್ತಿದ್ದಾರೆ. ದರ ಏರಿಕೆಯಿಂದ ಜನರ ಮೇಲೆ ಹೊರೆಯಾಗುತ್ತಿದೆ. ಜನ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಆದರೆ ದೇಶದ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬದಲು ಕೇವಲ ಮಾತಿನಲ್ಲೇ ಪ್ರತಿಯೊಬ್ಬರಿಗೂ ಮನವರಿಕೆ ಮಾಡುತ್ತಿದೆ ಎಂದು ಟೀಕಿಸಿದರು.
ಮೋದಿ ಸರ್ಕಾರವು ಪ್ರತಿಯೊಂದಕ್ಕೂ ವಿರೋಧ ಪಕ್ಷಗಳನ್ನು ಬೈಯೋದು, ವಿರೋಧ ಪಕ್ಷಗಳು ದೇಶದ ಅಭಿವೃದ್ಧಿಗೆ ಸಹಕರಿಸುತ್ತಿಲ್ಲ ಎಂದು ದೂರುವುದನ್ನು ಮಾತ್ರ ಮಾಡುತ್ತಿದೆ. ವಿರೋಧ ಪಕ್ಷಗಳು ಯಾವಾಗಲೂ ದೇಶದ ಪರವಾಗಿಯೇ ಇವೆ. ಜನರ ಬಗೆಗೆ ಚಿಂತನೆ ಮಾಡುತ್ತಲೇ ಇವೆ. ಆದರೆ, ಬಿಜೆಪಿ ಜನರಿಗೆ ಏನೆಲ್ಲ ಭರವಸೆ ಕೊಟ್ಟಿತ್ತೋ ಅದನ್ನು ಈಡೇರಿಸುತ್ತಿಲ್ಲ. ಹಣದುಬ್ಬರ ಏರುತ್ತಿದೆ. ನಿರುದ್ಯೋಗ ಹೆಚ್ಚುತ್ತಿದೆ. ನರೇಗಾ ಯೋಜನೆಯನ್ನೂ ದುರ್ಬಲಗೊಳಿಸಿದೆ. ಈ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ’ ಎಂದು ಟೀಕಿಸಿದರು.