ಸುದ್ದಿ ಸಂಗ್ರಹ ವಾಡಿ
ಇಲ್ಲಿನ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಮೇಲ್ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ಬಿಜೆಪಿ ಮುಖಂಡರು ಸೊಲ್ಲಾಪುರ ವಿಭಾಗದ ರೈಲ್ವೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಜನಸಂವಾದದ ಮುಖ್ಯಸ್ಥ ಡಿ.ಎನ್ ಸೌರಭ್ ಹಾಗೂ ಸ್ಟೇಷನ್ ಪ್ರಬಂಧಕ ಸಿ.ಎಚ್ ರಾಮಕೃಷ್ಣ ಅವರನ್ನು ಭೇಟಿಯಾದ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮತ್ತು ಮುಖಂಡರು, ನಿಲ್ದಾಣದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮನವಿ ಮಾಡಿದರು.
ವಾಡಿ ರೈಲು ನಿಲ್ದಾಣ ಮತ್ತು ಸುತ್ತಮುತ್ತಲಿನ ರೈಲ್ವೆ ಗೇಟ್ಗಳಿಂದಾಗಿ ನಿತ್ಯ ಸಾವಿರಾರು ಸಾರ್ವಜನಿಕರು ಮತ್ತು ಪ್ರಯಾಣಿಕರು ತೀವ್ರ ಸಂಚಾರ ಸಂಕಷ್ಟ ಎದುರಿಸುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮೇಲ್ಸೇತುವೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೆ ಕಳೆದ ಹಲವು ವರ್ಷಗಳಿಂದ ನಿಲ್ದಾಣದಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ಕುಡಿಯುವ ನೀರು, ಶೌಚಾಲಯ ಸೇರಿದಂತೆ ವಿವಿಧ ಅನಾನುಕೂಲಗಳ ಬಗ್ಗೆ ವಿವರಿಸಿದ ಅವರು ಶೀಘ್ರವೇ ಸಮಸ್ಯೆ ಬಗೆಹರಿಸುವಂತೆ ನಿಯೋಗ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ತಾಲೂಕು ಕಾರ್ಯದರ್ಶಿ ಕಿಶನ್ ಜಾಧವ್, ಯುವ ಮೋರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮಹಾತ್ಮ ಗಾಂಧಿ ಶಾಲೆಯ ಮುಖ್ಯಸ್ಥ ಅನ್ವರ್, ಪ್ರಮುಖ ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ, ಅಂಬದಾಸ ಜಾಧವ್, ಗಣಪತರಾವ್ ಸುತ್ರಾವೆ ಮತ್ತು ಸತೀಶ ಸಾವಳಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.