ಕಳಪೆ ಸ್ಕ್ರೀನ್‌ ಗಾರ್ಡ್‌ಗಳಿಗೆ ಬೀಳಲಿದೆ ಬ್ರೇಕ್: ಮೊಬೈಲ್ ಸ್ಕ್ರೀನ್ ಪ್ರೊಟೆಕ್ಟರ್‌ಗಳಿಗೆ BIS ಪ್ರಮಾಣಪತ್ರ ಕಡ್ಡಾಯ

ನವದೆಹಲಿ

ಸುದ್ದಿ ಸಂಗ್ರಹ ನವದೆಹಲಿ
ಮಾರುಕಟ್ಟೆಯಲ್ಲಿ ಸಿಗುವ ಕಳಪೆ ಗುಣಮಟ್ಟದ ಸ್ಮಾರ್ಟ್‌ಫೋನ್ ಸ್ಕ್ರೀನ್ ಪ್ರೊಟೆಕ್ಟರ್‌ಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ಇನ್ನು ಮುಂದೆ ದೇಶದಲ್ಲಿ ಸ್ಮಾರ್ಟ್‌ಫೋನ್ ಸ್ಕ್ರೀನ್ ಗಾರ್ಡ್‌ಗಳನ್ನು ಮಾರಾಟ ಮಾಡಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಗುಣಮಟ್ಟದ ಪ್ರಮಾಣಪತ್ರ ಪಡೆಯುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರವು ಕಳಪೆ ಗುಣಮಟ್ಟದ ಆಮದು ಉತ್ಪನ್ನಗಳಿಗೆ ಬ್ರೇಕ್ ಹಾಕಲಿದ್ದು, ಭಾರತೀಯ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತುಗಳು ಸಿಗುವಂತೆ ಮಾಡಲಿದೆ. ಜೊತೆಗೆ ಸ್ಥಳೀಯವಾಗಿ ಉತ್ಪಾದನೆ ಆರಂಭಿಸಿರುವ ದೇಶೀಯ ಕಂಪನಿಗಳಿಗೆ ಬಲ ತುಂಬಲಿದೆ.

ಏಪ್ರಿಲ್ 1ರಿಂದ ಜಾರಿ
ಸೆಪ್ಟೆಂಬರ್ 21ರಂದು ಹೊರಡಿಸಲಾದ ಅಧಿಕೃತ ಅಧಿಸೂಚನೆಯ ಪ್ರಕಾರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸರಕುಗಳ (ಕಡ್ಡಾಯ ನೋಂದಣಿ ಅವಶ್ಯಕತೆ) ಆದೇಶ, 2021ರ ಅಡಿಯಲ್ಲಿ ಸ್ಮಾರ್ಟ್‌ಫೋನ್ ಸ್ಕ್ರೀನ್ ಪ್ರೊಟೆಕ್ಟರ್‌ಗಳನ್ನು ಸೇರಿಸಲಾಗಿದೆ. ಭಾರತೀಯ ಗುಣಮಟ್ಟ ಮಾನದಂಡ ನಿಯಮಗಳು 2027ರ ಏಪ್ರಿಲ್ 1ರಿಂದ ಅನ್ವಯವಾಗಲಿದ್ದು, ಅಲ್ಲಿಂದ ಮುಂದೆ ನಿಯಮ ಉಲ್ಲಂಘಿಸಿ ಮಾರಾಟ ಮಾಡಲು ಅವಕಾಶವಿರುವುದಿಲ್ಲ.

ಕಡ್ಡಾಯ BIS ನಿಯಮ ವ್ಯಾಪ್ತಿಗೆ ಸೇರಿದ 66ನೇ ಉತ್ಪನ್ನ ಇದಾಗಿದೆ. ಈ ಹಿಂದೆ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಚಾರ್ಜರ್‌ಗಳು, ಎಲ್‌ಇಡಿ ಟಿವಿ, ಮೈಕ್ರೋವೇವ್ ಓವನ್, ಪ್ರಿಂಟರ್ ಮತ್ತು ಸೆಟ್‌ಟಾಪ್ ಬಾಕ್ಸ್‌ಗಳಿಗೆ ಈ ನಿಯಮ ಜಾರಿಗೊಳಿಸಲಾಗಿತ್ತು.

2025ರ ಲೆಕ್ಕಾಚಾರದ ಪ್ರಕಾರ, ಭಾರತದಲ್ಲಿ ವಾರ್ಷಿಕ 40 ಕೋಟಿ ಹೆಚ್ಚು ಟೆಂಪರ್ಡ್ ಗ್ಲಾಸ್‌ಗಳ ಮಾರುಕಟ್ಟೆ ಇದ್ದು, ಇದರ ಒಟ್ಟು ಚಿಲ್ಲರೆ ಮೌಲ್ಯ ಬರೋಬ್ಬರಿ 20,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಸರ್ಕಾರದ ಈ ಕಠಿಣ ಹೆಜ್ಜೆಯಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಕಳಪೆ ಗ್ಲಾಸ್ ಹಾಕಿ ಮೋಸ ಹೋಗುತ್ತಿದ್ದ ಗ್ರಾಹಕರಿಗೆ ದೊಡ್ಡ ರಿಲೀಫ್ ಸಿಗಲಿದೆ.

Leave a Reply

Your email address will not be published. Required fields are marked *