ಹರವಾಳ, ತಡಕಲ್‌ಗೆ ಪರೋಪಕಾರಿ ಪ್ರಶಸ್ತಿ
ಪ್ರವೀಣ ಪಾಟೀಲ್ ಹರವಾಳ, ಅಮರನಾಥ ತಡಕಲ್‌ಗೆ ಪರೋಪಕಾರಿ ಪ್ರಶಸ್ತಿ
ಸುದ್ದಿ ಸಂಗ್ರಹ ಕಲಬುರಗಿ
ಸಮಾಜಮುಖಿ ಕಾರ್ಯ, ಸಾರ್ವಜನಿಕ ಸೇವೆ ಮತ್ತು ಸಮುದಾಯದ ಹಿತಾಸಕ್ತಿಗಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ್ ಹರವಾಳ ಹಾಗೂ ವೀರಶೈವ ಲಿಂಗಾಯತ ಸಮಾಜದ ಮುಖಂಡ ಅಮರನಾಥ ತಡಕಲ್ ಅವರಿಗೆ ಈ ಸಾಲಿನ ಪರೋಪಕಾರಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಶಿಕ್ಷಣ ಪ್ರೇಮಿ, ಕನ್ನಡಪರ ಹಾಗೂ ಸಮಾಜ ಮುಖಿ ಚಿಂತಕರಾಗಿ ದ್ದ, ಶರಣಬಸವೇಶ್ವರ ವಿಶ್ವವಿದ್ಯಾಲಯದ ಮೌಲ್ಯ ಮಾಪನ ನಿಯಂತ್ರಕ ರಾಗಿ ಸೇವೆ ಸಲ್ಲಿಸಿದ್ದ ದಿ.ಡಾ.ಲಿಂಗರಾಜ ಶಾಸ್ತ್ರಿ ಅವರ ಐದನೇ ಪುಣ್ಯ ಸ್ಮರಣೆ ಅಂಗವಾಗಿ ಸೆ.19ರಂದು ಈ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ವಿಶೇಷ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ. ನಗರದ ಅನ್ನಪೂರ್ಣ ಕ್ರಾಸ್ ಬಳಿಯ ಹಿಂದಿ ಪ್ರಚಾರ ಸಭಾ ಭವನದಲ್ಲಿ ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮವು ಕಟ್ಟಿಮನಿ
ಹಿರೇಮಠ ಸಂಸ್ಥಾನ ಪಾಳಾದ ಡಾ.ಗುರುಮೂರ್ತಿ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಜರುಗಲಿದೆ. ಕಾಂಗ್ರೆಸ್‌ನ ನೂತನ ಜಿಲ್ಲಾಧ್ಯಕ್ಷ ಡಾ.ಕಿರಣ ದೇಶಮುಖ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಮಾಜಮುಖಿ ಚಿಂತಕ ಅಶೋಕ ಗುರುಜಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ವೀರಶೈವ ಮಹಾಸಭಾ ಜಿಲ್ಲಾ ಸದಸ್ಯತ್ವ ಅಭಿಯಾನದ ಪ್ರಮುಖ ಎಂ.ಎಸ್.ಪಾಟೀಲ್ ನರಿಬೋಳ, ಯೋಗಾ ಇನ್‌ಸ್ಟಕ್ಟರ್ ಹಾಗೂ ಹೂವಿನಹಡಗಲಿ ಬರಹಗಾರರ ಬಳಗದ ಅಧ್ಯಕ್ಷೆ ಜ್ಯೋತಿ ಪಾಟೀಲ್ ಜೈನಾಪುರ, ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಹುಚ್ಚೇಶ್ವರ ವಠಾರ, ಕುರುಬ ಸಂಘದ ಯಡ್ರಾಮಿ ತಾಲೂಕು ಅಧ್ಯಕ್ಷ ಮಲ್ಲು ಕುಳಗೇರಿ ಹಾಗೂ ಪ್ರಿಯದರ್ಶಿನಿ ಗ್ರಾಮೀಣಾಭಿವೃದ್ಧಿ ಫೌಂಡೇಶನ್ ಅಧ್ಯಕ್ಷೆ ಸುಮಾ ಎಸ್.ಕವಲ್ದಾರ್ ಉಪಸ್ಥಿತರಿರುವರು.