ಸುದ್ದಿ ಸಂಗ್ರಹ ಕಲಬುರಗಿ
ಕೆಪಿಎಸ್ಸಿ ನಡೆಸುತ್ತಿರುವ ಪಶುವೈದ್ಯಕೀಯ ಅಧಿಕಾರಿಗಳ ನೇಮಕ ಪ್ರಕ್ರಿಯೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಬುಧವಾರ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಗರದ ರಿಂಗ್ ರಸ್ತೆಯ ಓಝಾ ಬಡಾವಣೆಯ ರವೀಂದ್ರನಾಥ ಟ್ಯಾಗೋರ್ ಕಾಲೊನಿಯಲ್ಲಿರುವ ಅಭ್ಯರ್ಥಿ ಮಮಿತಾ ಅವರು ನೆಲೆಸಿರುವ ಮನೆಯ ಮೇಲೆ ಸಿಐಡಿ ಡಿವೈಎಸ್ಪಿ ಅಸ್ಲಂ ಪಾಶಾ, ಇನ್ ಸ್ಪೆಕ್ಟರಗಳಾದ ಮಹೇಶ ಮತ್ತು ಮಹೇಶ್ವರ ರೆಡ್ಡಿ ಅವರ ತಂಡವು ಬೆಳಿಗ್ಗೆ 9 ಗಂಟೆ ಸುಮಾರಿಗೆ ದಾಳಿ ನಡೆಸಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ನಾಲ್ವರು ಪೊಲೀಸರು ಭದ್ರತೆ ಒದಗಿಸಿದ್ದಾರೆ.
ಈ ಪ್ರಕರಣದಲ್ಲಿ ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ ಮತ್ತು ಅಭ್ಯರ್ಥಿ ಮಮಿತಾ ಆರೋಪಿಗಳಾಗಿದ್ದಾರೆ.
ಮಮಿತಾ ಅವರು ಸದ್ಯ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಕೋಬಾಳಕರ್ ಅವರೊಂದಿಗೆ ಓಝಾ ಬಡಾವಣೆಯ ನಿವಾಸದಲ್ಲಿ ನೆಲೆಸಿದ್ದಾರೆ. ಮಮಿತಾ ಅವರು ಸದಸ್ಯೆ ಶಾಂತಾ ಹೊಸಮನಿ ಮೂಲಕ ನೇಮಕವಾಗಲು ಯತ್ನಿಸಿದ ಆರೋಪ ಕೇಳಿಬಂದಿತ್ತು.
ಕಳೆದ ಆಗಸ್ಟ್ 18ರಂದು ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಮಮಿತಾ ಅವರ ಮನೆಯ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದು ಸ್ಮರಣೀಯ.