ಅಂಗನವಾಡಿ ಕಾರ್ಯಕರ್ತೆಯರ ವೇತನ 4,000 ರೂ. ಹೆಚ್ಚಳ, 5 ಲಕ್ಷದವರೆಗೆ ಆರೋಗ್ಯ ಸೇವೆ: ಸಿಎಂ ಯೋಗಿ ಬಂಪರ್‌ ಗಿಫ್ಟ್‌

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಅಯೋಧ್ಯೆ
ಉತ್ತರ ಪ್ರದೇಶದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಂಪರ್‌ ಗಿಫ್ಟ್‌ ಕೊಟ್ಟಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 8,000 ರೂ. ನಿಂದ 12,000 ರೂ.ಗೆ ಹೆಚ್ಚಿಸುವುದಾಗಿ ಮತ್ತು ಸಹಾಯಕಿಯರ ಗೌರವಧನ 4,000 ರೂ. ನಿಂದ 6,000 ರೂ.ಗಳಿಗೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ.

ಅಯೋಧ್ಯೆ ಪ್ರವಾಸದ ವೇಳೆ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 5 ಲಕ್ಷ ರೂ.ವರೆಗೆ ನಗದುರಹಿತ ಆರೋಗ್ಯ ಸೇವೆ ಒದಗಿಸುವ ಯೋಜನೆ ಪ್ರಕಟಿಸಿದರು.

ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸೀರೆ ವಿತರಣೆ ಮಾಡಿದರು. ಜೊತೆಗೆ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಿಸಿದರು.

ಗೌರವಧನ ಹೆಚ್ಚಳ
ಪರಿಷ್ಕೃತ ವೇತನ ವ್ಯವಸ್ಥೆಯಂತೆ ಉತ್ತರ ಪ್ರದೇಶದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ಗೌರವಧನವು 8,000 ರೂ. ನಿಂದ 12,000 ರೂ.ಗೆ ಹೆಚ್ಚಳವಾಗಲಿದೆ. ಅದೆ ರೀತಿ ಅಂಗನವಾಡಿ ಸಹಾಯಕಿಯರ ಗೌರವಧನ 4,000 ರೂ. ನಿಂದ 6,000 ರೂ.ವರೆಗೆ ಹೆಚ್ಚಳ ಮಾಡಲಾಗಿದೆ. ಇದರ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 5 ಲಕ್ಷದವರೆಗೆ ನಗದು ರಹಿತ ಆರೋಗ್ಯ ಚಿಕಿತ್ಸಾ ಸೌಲಭ್ಯ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಘೋಷಿಸಿದರು.

ಮಕ್ಕಳ ಪೋಷಣೆ, ಮಹಿಳೆಯರ ಆರೋಗ್ಯ ಮತ್ತು ತಾಯಿ-ಮಗು ಕಲ್ಯಾಣ ಸೇವೆಗಳಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಸಾವಿರಾರು ಅಂಗನವಾಡಿ ಸಿಬ್ಬಂದಿಗೆ ಈ ಘೋಷಣೆಗಳು ಮಹತ್ವದ ಪ್ರಯೋಜನವಾಗಲಿವೆ ಎಂದು ಹೇಳಲಾಗಿದೆ.

ಅಂಗನವಾಡಿ ಮೇಲ್ವಿಚಾರಕರಿಗೆ ಸನ್ಮಾನ
ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುಟಾಣಿ ಮಕ್ಕಳಿಗೆ ಚಾಕೊಲೇಟ್‌ಗಳನ್ನ ವಿತರಿಸಿದರು. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು. ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಅಂಗನವಾಡಿ ಮೇಲ್ವಿಚಾರಕರನ್ನೂ ಇದೆ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಅಯೋಧ್ಯೆ ಪ್ರವಾಸದ ಅಂಗವಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಂಗನವಾಡಿ ಕಾರ್ಯಕರ್ತೆಯರು ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಇದೆ ವೇಳೆ ಅಂಗನವಾಡಿ ಕಾರ್ಯಕರ್ತೆಯರ ಕರ್ತವ್ಯಗಳನ್ನೂ ನೆನಪಿಸಿದರು.

ಇದಕ್ಕೂ ಮುನ್ನ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

Leave a Reply

Your email address will not be published. Required fields are marked *