ದಾಳಿ ವೇಳೆ ಅರಣ್ಯ ಅಧಿಕಾರಿ ಮನೆಯಲ್ಲಿದ್ದ ಹಣ ಎಣಿಸಿ ಎಣಿಸಿ ಅಧಿಕಾರಿಗಳು ಸುಸ್ತು

ಸುದ್ದಿ ಸಂಗ್ರಹ

ಭುವನೇಶ್ವರ: ಭ್ರಷ್ಟ ಅಧಿಕಾರಿಗಳ ಹೆಡೆಮುರಿ ಕಟ್ಟಲು ಒಡಿಶಾ ವಿಜಿಲೆನ್ಸ್ ಅಧಿಕಾರಿಗಳು ಮುಂದಾಗಿದ್ದು ಇದರ ಭಾಗವಾಗಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಮನೆಯ ಮೇಲೆ ಶುಕ್ರವಾರ(ಜು.25) ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ, ಈ ವೇಳೆ ಅಧಿಕಾರಿಯ ಮನೆಯಲ್ಲಿ ಚಿನ್ನದ ನಾಣ್ಯ ಸೇರಿದಂತೆ ಕೋಟ್ಯಾಂತರ ಮೌಲ್ಯದ ನಗದು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಆರೋಪದ ಮೇಲೆ ವಿಜಿಲೆನ್ಸ್ ಅಧಿಕಾರಿಗಳು ಶುಕ್ರವಾರ ಕೊರಾಪುಟ್ ಜಿಲ್ಲೆಯ ಜೆಪೋರ್ ಅರಣ್ಯ ವಿಭಾಗದ ಜೇಪೋರ್ ಅರಣ್ಯ ಶ್ರೇಣಿಯ ಉಪ ರೇಂಜರ್ ರಾಮ ಚಂದ್ರ ನೇಪಕ್ ಅವರ ಒಡೆತನದ ಮನೆ ಸೇರಿದಂತೆ ಭುವನೇಶ್ವರ ಮತ್ತು ಕೊರಾಪುಟ್‌ನಲ್ಲಿರುವ ಕಚೇರಿಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ, ಈ ವೇಳೆ ಅವರ ಮನೆ ಹಾಗೂ ಕಚೇರಿಗಳಲ್ಲಿ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಗಳಿಸಿರುವುದು ಬೆಳಕಿಗೆ ಬಂದಿದೆ, ಅಲ್ಲದೆ ಅಧಿಕಾರಿಯ ಮನೆಯ ಲಾಕರ್’ನಲ್ಲಿದ್ದ ಹಣದ ಕಂತೆ ಕಂತೆ ಕಂಡು ಅಧಿಕಾರಿಗಳು ದಂಗಾಗಿದ್ದಾರೆ.

ದಂಗಾದ ಅಧಿಕಾರಿಗಳು
ಅರಣ್ಯ ಅಧಿಕಾರಿಯ ಆಸ್ತಿಗೆ ಸಂಬಂಧಿಸಿ ಜೈಪೋರ್ ಮತ್ತು ಭುವನೇಶ್ವರದ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ, ಈ ವೇಳೆ ಜೇಪೋರ್ ನಲ್ಲಿರುವ ಅಪಾರ್ಟ್‌ಮೆಂಟ್‌ ನಲ್ಲಿರುವ ಮನೆಯ ರಹಸ್ಯ ಖಜಾನೆಯಲ್ಲಿ ಬಚ್ಚಿಟ್ಟಿದ್ದ 1.44 ಕೋಟಿ ರೂ. ಮೊತ್ತದ ನಗದು ಪತ್ತೆಯಾಗಿದೆ. ಅಷ್ಟು ಮಾತ್ರವಲ್ಲದೆ ನಾಲ್ಕು ಚಿನ್ನದ ಬಿಸ್ಕತ್ತುಗಳು ಮತ್ತು 16 ಚಿನ್ನದ ನಾಣ್ಯಗಳನ್ನು ಪತ್ತೆಹಚ್ಚಲಾಗಿದೆ. ಇದನ್ನು ಕಂಡು ಅಧಿಕಾರಿಗಳು ದಂಗಾಗಿದ್ದಾರೆ.

ಚಿನ್ನದ ಮೌಲ್ಯ ಪತ್ತೆಹಚ್ಚುವ ಕೆಲಸ ನಡೆಯುತ್ತಿದ್ದು, ಯಂತ್ರದ ಮೂಲಕ ಹಣ ಎನಿಸುವ ಕೆಲಸ ನಡೆಯುತ್ತಿದೆ.

1989 ರಲ್ಲಿ ಕೊರಾಪುಟ್ ನಲ್ಲಿ ಗ್ರಾಮ ಅರಣ್ಯ ಕಾರ್ಯಕರ್ತನಾಗಿ ಕೆಲಸಕ್ಕೆ ನಿಯೋಜನೆಗೊಂಡಿದ್ದರು ಇದಾದ ಬಳಿಕ ಅವರನ್ನು ಜೇಪೋರ್ ಅರಣ್ಯ (ಪ್ರಾದೇಶಿಕ) ವಿಭಾಗದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಯಿತು. ಪ್ರಸ್ತುತ, ಅವರು ಜೇಪೋರ್ ಅರಣ್ಯ ಶ್ರೇಣಿಯಲ್ಲಿ ಡೆಪ್ಯೂಟಿ ರೇಂಜರ್ ಕಮ್ ಇನ್-ಚಾರ್ಜ್ ರೇಂಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ತಿಂಗಳಿಗೆ ರೂ 76,880 ಸಂಬಳ ಪಡೆಯುತ್ತಿದ್ದಾರೆ ಎಂದು ಒಡಿಶಾ ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *