ಸುದ್ದಿ ಸಂಗ್ರಹ ಬೆಂಗಳೂರು
ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಪ್ರಯಾಣಿಕನೊಬ್ಬ ವಿಚಿತ್ರ ಮಾರ್ಗ ಅನುಸರಿಸಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ. ದುಬೈನಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕನ ಬಾಯಿಯಲ್ಲಿ ಬರೋಬ್ಬರಿ 82 ಗ್ರಾಂ ಚಿನ್ನ ಪತ್ತೆಯಾಗಿದೆ.
ಮಹಮ್ಮದ್ ಸಿರಾಜ್ ಎಂಬ ಪ್ರಯಾಣಿಕ ದುಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದಿದ್ದ. ಬಳಿಕ ಬೆಂಗಳೂರಿನಿಂದ ಗಾಜಿಯಾಬಾದ್ಗೆ ತೆರಳಲು ಸಿದ್ಧವಾಗಿದ್ದ. ಈ ವೇಳೆ ಏರ್ಪೋರ್ಟ್ನಲ್ಲಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗೆ ಆತನ ವರ್ತನೆ ಅನುಮಾನ ಮೂಡಿಸಿದೆ.
ಸಿಬ್ಬಂದಿ ಆತನನ್ನು ಪರಿಶೀಲಿಸಿದರೂ ಮೊದಲಿಗೆ ಯಾವುದೆ ಅನುಮಾನಾಸ್ಪದ ವಸ್ತು ಪತ್ತೆಯಾಗಿರಲಿಲ್ಲ. ಬಳಿಕ ಆತನ ಬಾಯಿಯನ್ನು ಪರಿಶೀಲಿಸಿದಾಗ ಎರಡು ಚಿನ್ನದ ಕ್ಯಾಪ್ಸೂಲ್ಗಳು ಪತ್ತೆಯಾಗಿವೆ. ಅವುಗಳಲ್ಲಿ ಒಟ್ಟು 82 ಗ್ರಾಂ ಚಿನ್ನ ಇತ್ತು ಎನ್ನಲಾಗಿದೆ.
ಬಾಡಿ ಸ್ಕ್ಯಾನರ್ನಿಂದ ಚಿನ್ನ ಪತ್ತೆಯಾಗದಂತೆ ಮಾಡಲು ಬಾಯಿಯಲ್ಲಿ ಚಿನ್ನದ ಕ್ಯಾಪ್ಸೂಲ್ಗಳನ್ನು ಇಟ್ಟುಕೊಂಡು ಬಂದಿದ್ದ ಎನ್ನಲಾಗಿದೆ. ಆದರೆ CISF ಸಿಬ್ಬಂದಿಯ ಅನುಮಾನದಿಂದಾಗಿ ಕೊನೆಗೂ ಆತನ ಕೃತ್ಯ ಬಯಲಾಗಿದೆ.
ಸದ್ಯ ಮಹಮ್ಮದ್ ಸಿರಾಜ್ನನ್ನು ಹೆಚ್ಚಿನ ತನಿಖೆಗಾಗಿ KIA ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಚಿನ್ನ ಎಲ್ಲಿಂದ ಬಂದಿತ್ತು, ಯಾರಿಗೆ ತಲುಪಿಸಬೇಕಿತ್ತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.