8.43 ಕೋಟಿ ಹಗರಣ ಪ್ರಕರಣ: ಕಿಂಗ್‌ಪಿನ್ ಸಹೋದರನ ಬಂಧನ

ಜಿಲ್ಲೆಯ

ಸುದ್ದಿ ಸಂಗ್ರಹ ಕೊಪ್ಪಳ
ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಬರೋಬ್ಬರಿ 8.43 ಕೋಟಿ ರೂ ಹಗರಣ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು, ಪ್ರಮುಖ ಆರೋಪಿ ರವೀಂದ್ರಕುಮಾರ್‌ನ ಸಹೋದರ ಅನಿಲಕುಮಾರ್‌ನನ್ನು ಬೆಂಗಳೂರಿನಲ್ಲಿ ಅತ್ಯಂತ ರೋಚಕವಾಗಿ ಬಂಧಿಸಿದ್ದಾರೆ. ನಿವೇಶನ ಕೊಡಿಸುವುದಾಗಿ ನಂಬಿಸಿ ಪ್ರಾಧಿಕಾರದ ಅಧಿಕೃತ ಬ್ಯಾಂಕ್ ಖಾತೆಯಿಂದಲೇ ಸುಮಾರು 40ಕ್ಕೂ ಹೆಚ್ಚು ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ವಂಚಿಸಲಾಗಿತ್ತು. ಈ ಪೈಕಿ ಅನಿಲಕುಮಾರ್ ಖಾತೆಗೆ ಐದಕ್ಕೂ ಹೆಚ್ಚು ಕಂತುಗಳಲ್ಲಿ 1 ಕೋಟಿಗೂ ಅಧಿಕ ಮೊತ್ತ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮಗನಿಗೆ ಮಾಡಿದ ಒಂದೆ ಕರೆಯಿಂದ ಬಲೆಗೆ ಬಿದ್ದ ಆರೋಪಿ
ಹಗರಣ ಬಯಲಾಗುತ್ತಿದ್ದಂತೆಯೇ ಅನಿಲಕುಮಾರ್ ಫೋನ್ ಮನೆಯಲ್ಲೇ ಬಿಟ್ಟು ಬೆಂಗಳೂರಿಗೆ ಪರಾರಿಯಾಗಿದ್ದ. ಪೊಲೀಸರ ಕಣ್ತಪ್ಪಿಸಲು ಬೆಂಗಳೂರಿನ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಯಲ್ಲಿ ತಲೆಮರೆಸಿಕೊಂಡಿದ್ದನು.

ಇನ್ನು ಬೆಂಗಳೂರಿನಲ್ಲೇ ವ್ಯಾಸಂಗ ಮಾಡುತ್ತಿರುವ ತನ್ನ ಪುತ್ರನಿಗೆ ಕರೆ ಮಾಡಲು ಯತ್ನಿಸಿದ್ದಾನೆ. ಈ ಕರೆಯ ಜಾಡು ಹಿಡಿದ ಕೊಪ್ಪಳ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮುಖ್ಯ ಆರೋಪಿ ರವೀಂದ್ರಕುಮಾರ್‌ಗೆ ತೀವ್ರ ಶೋಧ
ಇನ್ನು ಪ್ರಾಧಿಕಾರದಲ್ಲಿ ಹೊರಗುತ್ತಿಗೆ ನೌಕರನಾಗಿದ್ದುಕೊಂಡು ಇಡಿ ಹಗರಣದ ರೂವಾರಿಯಾಗಿರುವ ರವೀಂದ್ರಕುಮಾರ್ ಸದ್ಯ ತಲೆಮರೆಸಿಕೊಂಡಿದ್ದಾನೆ. ಆತ ಹೊರ ರಾಜ್ಯಕ್ಕೆ ಪಲಾಯನ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಾಧಿಕಾರದ ಸಾರ್ವಜನಿಕ ಹಣವನ್ನು ಲೂಟಿ ಮಾಡಿದ ಜಾಲದ ಸಂಪೂರ್ಣ ಮಾಹಿತಿಯನ್ನು ಹೊರತರಲು ಬಂಧಿತ ಅನಿಲ್ ಕುಮಾರ್‌ನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *