ಬಸ್‌ನಲ್ಲಿ ವಿದ್ಯಾರ್ಥಿಯಿಂದ ಟಿಕೆಟ್ ವಿತರಣೆ: ಚಾಲಕ-ಕಂ-ಕಂಡಕ್ಟರ್‌ ಅಮಾನತು

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಲಬುರಗಿ
ಕೆಕೆಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರಿಗೆ ವಿದ್ಯಾರ್ಥಿ ಮೂಲಕ ಟಿಕೆಟ್ ವಿತರಿಸಿದ ಪ್ರಕರಣ ಸಂಬಂಧ, ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಕಂಡಕ್ಟರ್‌ನನ್ನು ಅಮಾನತುಗೊಳಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿ ವಿಭಾಗ-1ರ ವ್ಯಾಪ್ತಿಯ ಕಾಳಗಿ ಘಟಕದ ಚಾಲಕ-ಕಂ-ನಿರ್ವಾಹಕ ಸಿದ್ದಪ್ಪನನ್ನು ಅಮಾನತುಗೊಳಿಸಲಾಗಿದೆ.

ಪ್ರಕರಣ ಸಂಬಂಧ ತನಿಖೆ ನಡೆಸಿದ ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ ಗಂಗಾಧರ, ಕಳೆದ ಆಗಸ್ಟ್ 18 ರಂದು ಕಾಳಗಿ-ಕಲಬುರಗಿ-ಮಂಗಲಗಿ ಮಾರ್ಗದ KA-32 F-2066 ಬಸ್‌ನಲ್ಲಿ ಕರ್ತವ್ಯದ ಮೇಲಿದ್ದ ಚಾಲಕ-ಕಂ-ನಿರ್ವಾಹಕ ಸಿದ್ದಪ್ಪ (ಸಂಖ್ಯೆ: 7785) ಕಲಬುರಗಿ ಸೂಪರ್ ಮಾರ್ಕೆಟ್ ಬಸ್ ನಿಲ್ದಾಣದಲ್ಲಿ ವಾಹನ ನಿಲ್ಲಿಸಿದಾಗ, ತಮ್ಮ ಸುಪರ್ದಿಯಲ್ಲಿ ಇರಬೇಕಾಗಿದ್ದ ಇಟಿಎಂ ಯಂತ್ರವನ್ನು ಬಸ್ಸಿನಲ್ಲೆ ಬಿಟ್ಟು ತೆರಳಿದ್ದರು.

ಈ ವೇಳೆ ಬಸ್ಸಿನಲ್ಲಿದ್ದ ವಿದ್ಯಾರ್ಥಿ ಪ್ರಯಾಣಿಕನೊಬ್ಬ ಇಟಿಎಂ ಯಂತ್ರ ಬಳಸಿ ಇತರ ಪ್ರಯಾಣಿಕರಿಗೆ 11 ಟಿಕೆಟ್‌ ವಿತರಿಸಿದ್ದು, ಈ ದೃಶ್ಯವನ್ನು ಪ್ರಯಾಣಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದರಿಂದ ನಿಗಮದ ಘನತೆಗೆ ಧಕ್ಕೆ ಉಂಟಾದ ಹಿನ್ನೆಲೆಯಲ್ಲಿ, ನೌಕರರ ಶಿಸ್ತು ನಿಯಮಾವಳಿಗಳ ಪ್ರಕಾರ ಸಿದ್ದಪ್ಪ ಅವರನ್ನು ಅಮಾನತುಗೊಳಿಸಲಾಗಿದೆ.

Leave a Reply

Your email address will not be published. Required fields are marked *