ಸುದ್ದಿ ಸಂಗ್ರಹ ಕಲಬುರಗಿ
ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕಲಬುರಗಿ ವೃತ್ತದ ನಿವೃತ್ತ ಸೂಪರಿಂಟೆಂಡೆಂಟ್ ಎಂಜಿನಿಯರ್ ಮಾಣಿಕ ಎಸ್.ಕನಕಟ್ಟೆ ವಿರುದ್ಧ ಲೋಕಾಯುಕ್ತ ಅಧಿಕಾರಿಗಳ ದಾಳಿ ಬುಧವಾರವೂ ಮುಂದುವರಿದಿದೆ.
ಮಾಣಿಕ ಅವರ ಬ್ಯಾಂಕ್ ಲಾಕರ್ನಲ್ಲಿ ಅಮಾನ್ಯೀಕರಣವಾದ ಹಳೆಯ 1,000 ರೂ ಮುಖಬೆಲೆಯ ಸುಮಾರು 9 ಲಕ್ಷ ನೋಟುಗಳು ಪತ್ತೆಯಾಗಿವೆ. ಇದರ ಜೊತೆಗೆ 20 ತೊಲೆಗೂ ಹೆಚ್ಚು ಬಂಗಾರ ಪತ್ತೆಯಾಗಿದೆ.
ಚಿನ್ನಾಭರಣದಲ್ಲಿ ಸುತ್ತುಂಗುರಗಳು, ನಕ್ಲೆಸ್ ಸೇರಿದಂತೆ ಹಲವು ಬಗೆ ಆಭರಣಗಳು ಇವೆ.
ಸ್ಥಳದಲ್ಲಿ ಡಿವೈಎಸ್ಪಿ ಬಸವರಾಜ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಅರುಣಕುಮಾರ ಮತ್ತು ರಾಜಶೇಖರ ಬಡದೇಸಾರ ಸೇರಿದಂತೆ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಮಾಣಿಕ ಅವರ ಮನೆ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಮಾಣಿಕ ಅವರು ಬೆಂಗಳೂರಿನಲ್ಲಿದ್ದರು. ಅವರಿಗೆ ಕಲಬುರಗಿಗೆ ಬರುವಂತೆ ಅಧಿಕಾರಿಗಳು ಬುಲಾವ್ ನೀಡಿದ್ದರು. ಮಂಗಳವಾರ ರಾತ್ರಿ ಬಂದ ಅವರನ್ನು ಬುಧವಾರ ಬೆಳಿಗ್ಗೆ ಕಲಬುರಗಿಯ ಎಸ್.ಬಿ ಟೆಂಪಲ್ ರಸ್ತೆಯ ಸಂಗಮೇಶ್ವರ ಕಾಲೊನಿಯ ಎಸ್ಬಿಐ ಬ್ಯಾಂಕ್ಗೆ ಕರೆದೊಯ್ದು ಲಾಕರ್ನಲ್ಲಿ ಪರಿಶೀಲಿಸಿದಾಗ ಇದೆಲ್ಲ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.