ಸುದ್ದಿ ಸಂಗ್ರಹ ಬೆಂಗಳೂರು
ಕರ್ನಾಟಕದಲ್ಲಿ ಮುಂಗಾರು ದುರ್ಬಲಗೊಂಡಿದ್ದು, ಅಲ್ಲಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಬೆಂಗಳೂರು ಹವಾಮಾನ ಇಲಾಖೆ ನೀಡಿದೆ.
ನಾಳೆಯ ಹವಾಮಾನ
ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು, ತುಮಕೂರಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ಕೊಡಲಾಗಿದೆ. ಬಿರುಗಾಳಿ ಸಹಿತ-ಭಾರಿ ಮಳೆಯ ನಿರೀಕ್ಷೆ ಇದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಲಿದೆ.
ಜೂನ್22 ರಿಂದ ಮುಂಗಾರು ಚುರುಕು
ಮುಂದಿನ ವಾರ ಮಳೆ ಚುರುಕು ಪಡೆಯುವ ಮುನ್ಸೂಚನೆ ಇದೆ. ಸೋಮವಾರ ಜೂನ್ 22 ರಿಂದ ಕರಾವಳಿಗೆ 4 ದಿನ ಹಾಗೂ ದಕ್ಷಿಣ -ಉತ್ತರ ಒಳನಾಡಿನ ಕೆಲವ ಜಿಲ್ಲೆಗಳಿಗೆ 2 ದಿನ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಎಲ್ಲೆಲ್ಲಿ ಮಳೆ
ಜೂನ್ 22ರಿಂದ ಜೂನ್ 25ರ ವರೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕಲಬುರ್ಗಿ-ವಿಜಯಪುರ, ಜಿಲ್ಲೆಗಳಿಗೆ ಜೂನ್ 22 ಮತ್ತು 23ರಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೂ ಜೂನ್ 22 ಮತ್ತು 23ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಗುಡುಗು-ಬಿರುಗಾಳಿ ಅಬ್ಬರ
ರಾಜ್ಯದಾದ್ಯಂತ ಮುಂಗಾರು ಮಳೆ ಕ್ಷೀಣಿಸಿದೆ. ಜೂನ್ 18, 19 , 20 ಮತ್ತು 21 ರಂದು ಉತ್ತರ ಕರ್ನಾಟಕದ ಕೆಲವೆಡೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಉತ್ತರ ಒಳನಾಡಿನ ಕೆಲವೆಡೆ ಗುಡುಗು, ಮಿಂಚು ಸಹಿತ ಬಿರುಗಾಳಿಯ ಮುನ್ಸೂಚನೆ ಇದೆ.
ಕರಾವಳಿಯಲ್ಲಿ ಮಂಕಾದ ಮುಂಗಾರು
ಮಂಗಳೂರು ಕರಾವಳಿಯಾದ್ಯಂತ ಮುಂಗಾರು ಮಳೆ ತೀವ್ರ ನಿರಾಸೆ ಮೂಡಿಸಿದ್ದು, ಬುಧವಾರ ಮತ್ತೆ ಬಿಸಿಲಿನ ವಾತಾವರಣ ಕಂಡುಬಂದಿದೆ. ಕರಾವಳಿ ಜಿಲ್ಲೆಗಳಲ್ಲಿ ತಾಪಮಾನ ತುಸು ಏರಿಕೆಯಾಗಿದ್ದು ಸಾರ್ವಜನಿಕರು ಸೆಕೆಯಿಂದ ಕಂಗಾಲಾಗಿದ್ದಾರೆ.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ 3 ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಪ್ರಖರ ಬಿಸಿಲು ಹಾಗೂ ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಆದರೆ, ಬಿರುಬಿಸಿಲಿನ ನಡುವೆಯೂ ಸಂಜೆ ವೇಳೆಗೆ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ..
ಮುಂಗಾರು ಚೇತರಿಕೆ ಸಾಧ್ಯತೆ
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಾರುತಗಳು ‘ಅತಿ ದುರ್ಬಲ’ ಹಂತ ತಲುಪಿವೆ. ಆದರೆ ಜೂ.22ರಿಂದ ಮುಂಗಾರು ಅಲ್ಪ ಮಟ್ಟಿಗೆ ಚೇತರಿಕೆ ಕಾಣುವ ನಿರೀಕ್ಷೆಯಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಸದ್ಯ ಅರಬ್ಬಿ ಸಮುದ್ರ ವ್ಯಾಪ್ತಿಯಲ್ಲಿ ಗಂಟೆಗೆ 35ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ಸಮುದ್ರಕ್ಕೆ ಇಳಿಯುವ ಮುನ್ನೆಚ್ಚರಿಕೆ ವಹಿಸುವುದು ಒಳಿತು. ಮುಂಗಾರು ಅತಿ ದುರ್ಬಲವಾಗಿರುವ ಹಿನ್ನೆಲೆಯಲ್ಲಿ, ಹಗಲು ಹೊತ್ತಿನ ಅಧಿಕ ಬಿಸಿಲಿನ ತಾಪಮಾನದಿಂದಾಗಿ ಸ್ಥಳೀಯವಾಗಿ ಮೋಡಗಳು ಸೃಷ್ಟಿಯಾಗುತ್ತಿವೆ. ಈ ಸ್ಥಳೀಯ ಮೋಡಗಳ ಪ್ರಭಾವದಿಂದಾಗಿ ರಾಜ್ಯದ ಕೆಲವು ಸೀಮಿತ ಪ್ರದೇಶಗಳಲ್ಲಿ ಸಂಜೆ ವೇಳೆ ಅನಿರೀಕ್ಷಿತವಾಗಿ ಮಳೆಯಾಗುತ್ತದೆ.
ಜಾಗತಿಕ ಹವಾಮಾನ ವೈಪರೀತ್ಯದ ಭಾಗವಾಗಿ ‘ಎಲ್ ನಿನೋ’ ಪ್ರಕ್ರಿಯೆ ಈಗಾಗಲೇ ಆರಂಭವಾಗಿರುವ ವರದಿಗಳಿವೆ. ಇದು ಮುಂಬರುವ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದ್ದು, ನವೆಂಬರ್ ತಿಂಗಳಲ್ಲಿ ಅತ್ಯಂತ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಆತಂಕ ವ್ಯಕ್ತಪಡಿಸಿದೆ.
ಇದು ಕರಾವಳಿಯ ಒಟ್ಟಾರೆ ಮಳೆಯ ಪ್ರಮಾಣದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ರಾಜಧಾನಿ ಬೆಂಗಳೂರಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.