ಸುದ್ದಿ ಸಂಗ್ರಹ ಶಹಾಬಾದ್
ಆಸ್ತಿಗಾಗಿ ವ್ಯಕ್ತಿಯೊಬ್ಬ ತನ್ನ ಸಂಬಂಧಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಶಹಾಬಾದ್ ಮರಗೋಳ ಕಾಲೇಜ್ ಹತ್ತಿರದ ಬೀರಲಿಂಗೇಶ್ವರ ದೇವಸ್ಥಾನ ಮಹಾದ್ವಾರದ ಮುಂದೆ ಶುಕ್ರವಾರ ಸಂಜೆ ನಡೆದಿದೆ.
ನಾಗರಾಜ (40) ಕೊಲೆಯಾದವರಾಗಿದ್ದು, ತಿರುಪತಿ ದೇವಕರ ಕೊಲೆ ಆರೋಪಿಯಾಗಿದ್ದು. ತಿರುಪತಿ, ತನ್ನ ಸೋದರತ್ತೆಯ ಆಸ್ತಿಗಾಗಿ ಜೇವರ್ಗಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದ. ಆದರೆ ಇದಕ್ಕೆ ಅತ್ತೆಯ ಮಗ ನಾಗರಾಜ ಅಡ್ಡಿಯಾಗಿದ್ದ. ಇದರಿಂದ ಇತ್ತೀಚೆಗೆ ತೀವ್ರ ಕುಪಿತಗೊಂಡಿದ್ದ ತಿರುಪತಿ ನಾಗರಾಜನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದು ಕಲಬುರಗಿ ಎಎಸ್‌ಪಿ ಮಹೇಶ ಮೇಘಣ್ಣನವರ, ಡಿವೈಎಸ್‌ಪಿ ಶಂಕರಗೌಡ ಪಾಟೀಲ, ಸಿಪಿಐ ಪಿ.ಎಸ್.ವನಂಜಕರ, ಪಿಎಸ್‌ಐ ಚಂದ್ರಕಾಂತ ಮೆಕಾಲೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದರು.
ಕೊಲೆಯ ಬಳಿಕ ಆರೋಪಿ ತಿರುಪತಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಕುರಿತು ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.