ಸುದ್ದಿ ಸಂಗ್ರಹ ನವದೆಹಲಿ
ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡ ಬೆನ್ನಲ್ಲೆ ಚಿನ್ನ ಬೆಳ್ಳಿಯ ಮಾರುಕಟ್ಟೆ ಭಾರಿ ಪತನಗೊಂಡಿದೆ.
ಇಂದು ಕೇವಲ 3 ಗಂಟೆಯಲ್ಲೊ ಲೋಹ ಮಾರಕಟ್ಟೆಯಲ್ಲಿ ಒಟ್ಟಾರೆಯಾಗಿ 2 ಟ್ರಿಲಿಯನ್ ಡಾಲರ್(ಅಂದಾಜು 167.6 ಲಕ್ಷ ಕೋಟಿ ರೂ.) ಹೂಡಿಕೆ ಕರಗಿದೆ ಎಂದು ದಿ ಕೊಬೈಸ್ಸಿ ಲೆಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಅಮೂಲ್ಯ ಲೋಹಗಳಲ್ಲಿ ಇದೀಗ ವಿಚಿತ್ರವಾದ ಸಂಗತಿಯೊಂದು ನಡೆಯುತ್ತಿದೆ. ಯಾರೋ ದೊಡ್ಡ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಹೂಡಿಕೆ ಹಿಂದಕ್ಕೆ ಪಡೆಯುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದೆ.
ದಾಖಲೆ ಕುಸಿತವಾಗಿದ್ದು ಯಾಕೆ ?
ಸಾಧಾರಣವಾಗಿ ಷೇರು ಮಾರುಕಟ್ಟೆ ಕುಸಿದರೆ ವಿಶ್ವಾದ್ಯಂತ ಹೂಡಿಕೆದಾರರು ಚಿನ್ನ, ಬೆಳ್ಳಿ ಸುರಕ್ಷಿತ ಎಂಬ ಕಾರಣಕ್ಕೆ ಹೂಡಿಕೆ ಮಾಡುತ್ತಾರೆ. ಅಮೆರಿಕ-ಇರಾನ್ ಯುದ್ಧ ಆರಂಭಗೊಂಡ ಕೆಲ ವಾರ ಮಾರುಕಟ್ಟೆಯಲ್ಲಿ ಈ ರೀತಿಯ ವರ್ತನೆ ಕಂಡು ಬಂದಿತ್ತು. ಆದರೆ ಈಗ ವಿಶ್ವದ ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗುತ್ತಿದ್ದರೆ ಇನ್ನೊಂದು ಕಡೆ ಚಿನ್ನ, ಬೆಳ್ಳಿಯ ದರವೂ ದಾಖಲೆ ಮಟ್ಟದಲ್ಲಿ ಕುಸಿತ ಕಾಣುತ್ತಿದೆ.
ಈ ಕಾರಣಕ್ಕೆ ದಿ ಕೊಬೈಸ್ಸಿ ಲೆಟರ್ ಮಾರುಕಟ್ಟೆಯಲ್ಲಿ ವಿಚಿತ್ರವಾದ ವಿದ್ಯಮಾನ ನಡೆಯುತ್ತಿದೆ ಎಂದು ಪೋಸ್ಟ್ ಮಾಡಿದೆ. ಈ ಕುಸಿತಕ್ಕೆ ಈಗ ನಾವು ಹಲವು ಕಾರಣಗಳನ್ನು ನೀಡಬಹುದು. ಒಂದನೇಯದ್ದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ನಿಮ್ಮ ವಿದ್ಯುತ್ ಸ್ಥಾವರ ನಾಶ ಮಾಡುವುದಾಗಿ ಇರಾನಿಗೆ ಬೆದರಿಕೆ ಹಾಕಿದ್ದರು.
ಟ್ರಂಪ್ ಹೇಳಿಕೆಯಿಂದ ವಿಶ್ವದ ಷೇರು ಮಾರುಕಟ್ಟೆ ಭಾರಿ ಕುಸಿತವಾಗತೊಡಗಿದ್ದು ಹೂಡಿಕೆದಾರರು ಹೂಡಿಕೆ ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರದಿಂದ ಅಮೆರಿಕದ ಬಾಂಡ್ ಬಡ್ಡಿ ದರ ಏರಿಕೆ ಕಾಣುತ್ತಿದ್ದು 10 ವರ್ಷದ ಬಾಂಡ್ ಇಳುವರಿ 4.44% ಏರಿಕೆಯಾಗಿದೆ. ಪರಿಣಾಮ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದ ಹೂಡಿಕೆದಾರರು ಅಮೆರಿಕದ ಬಾಂಡ್ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.
ಎರಡನೇಯದ್ದು ಮುಖ್ಯ ಕಾರಣ ಮೊದಲೆ ಹೇಳಿದಂತೆ ಯಾರೊ ದೊಡ್ಡ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಲಾಭ ಮಾಡಿದ ಬಳಿಕ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರುವ ಸಾಧ್ಯತೆಯಿದೆ. ಕೋವಿಡ್ ಬಳಿಕ ಭಾರತ ಸೇರಿದಂತೆ ಹಲವು ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಭಾರಿ ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತಿದ್ದವು. ಇದರಿಂದಾಗಿ ಬೇಡಿಕೆ ಜಾಸ್ತಿಯಾಗಿ ಚಿನ್ನದ ದರ ಏರಿಕೆಯಾಗತೊಡಗಿತು.
ಈಗ ಇರಾನ್ ಯುದ್ಧದಿಂದಾಗಿ ಕಚ್ಚಾ ತೈಲ ದರಗಳು ಭಾರಿ ಏರಿಕೆ ಕಾಣತೊಡಗಿದೆ. ಮಾ.10ರ ಬಳಿಕ ಸುಮಾರು 95 ದೇಶಗಳು ಪೆಟ್ರೋಲ್ ದರ ಏರಿಕೆ ಮಾಡಿವೆ. ಬೆಲೆ ಏರಿಕೆ ನಿಯಂತ್ರಿಸಲು ಹಲವು ದೇಶಗಳು ಭಾರಿ ಪ್ರಯತ್ನ ನಡೆಸುತ್ತಿದ್ದು ಈಗ ಬಂದಿರುವ ಮಾಹಿತಿ ಪ್ರಕಾರ ಕೆಲ ದೇಶಗಳು ತಮ್ಮಲ್ಲಿರುವ ಚಿನ್ನವನ್ನು ಮಾರಾಟ ಮಾಡಲು ಮುಂದಾಗಿವೆ.
ಚಿನ್ನ, ಬೆಳ್ಳಿಯ ಪ್ರಮುಖ ಮಾರುಕಟ್ಟೆ ಮಧ್ಯಪ್ರಾಚ್ಯ ದೇಶಗಳು. ಯುದ್ಧದ ಕಾರಣದಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ವಿಮಾನ ಸೇವೆಯೇ ಬಂದ್ ಆಗಿದೆ. ಪರಿಣಾಮ ಪ್ರವಾಸೋದ್ಯಮ ಕ್ಷೇತ್ರ, ರಿಯಲ್ ಎಸ್ಟೇಟ್, ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ. ಚಿನ್ನ ಖರೀದಿ ಕಡಿಮೆಯಾಗುತ್ತಿರುವ ಕಾರಣ ಬೆಲೆ ಸಹ ಇಳಿಕೆಯಾಗುತ್ತಿದೆ.
ಸಾಮಾನ್ಯವಾಗಿ ಪ್ರಯಾಣಿಕ ವಿಮಾನಗಳ ಸರಕು ವಿಭಾಗಗಳಲ್ಲಿ ಚಿನ್ನವನ್ನು ಸಾಗಿಸಲಾಗುತ್ತದೆ. ಯುಎಇ ವಿಮಾನಗಳಿಗೆ ನಿರ್ಬಂಧ ಹೇರಿದ ಕಾರಣ ವ್ಯಾಪಾರಿಗಳು ಮತ್ತು ಲಾಜಿಸ್ಟಿಕ್ಸ್ ಪೂರೈಕೆದಾರರು ಸೌದಿ ಅರೇಬಿಯಾ ಅಥವಾ ಓಮನ್‌ನಂತಹ ನೆರೆಯ ರಾಷ್ಟ್ರಗಳಿಗೆ ರಸ್ತೆಗಳ ಮೂಲಕ ಬೆಳ್ಳಿ ಮತ್ತು ಚಿನ್ನ ಸಾಗಿಸಲು ಹಿಂಜರಿಯುತ್ತಿದ್ದಾರೆ. ವಿಶೇಷವಾಗಿ ಭೂ ಗಡಿಗಳನ್ನು ದಾಟುವಾಗ ಅಪಾಯ ಜಾಸ್ತಿ. ಈ ಕಾರಣಕ್ಕೆ ದುಬೈಯ ಕೆಲ ವ್ಯಾಪಾರಿಗಳು ಮೂಲ ದರಕ್ಕಿಂತಲೂ ಕಡಿಮೆ ದರದಲ್ಲಿ ಚಿನ್ನ ಮಾರಾಟ ಮಾಡಲು ಡಿಸ್ಕೌಂಟ್ ಪ್ರಕಟಿಸಿದರೂ ಮೊದಲಿನಂತೆ ಖರೀದಿ ನಡೆಯುತ್ತಿಲ್ಲ. ಡಾಲರ್ ದರ ಏರಿಕೆ ಇನ್ನೊಂದು ಕಡೆ ಚಿನ್ನದ ಬೇಡಿಕೆ ಕಡಿಯಾಗುತ್ತಿರುವ ಈಗ ಚಿನ್ನದ ದರ ಭಾರಿ ಇಳಿಕೆ ಕಂಡಿದೆ.
ಒಂದು ಕಡೆ ಎಐ ಕ್ರಾಂತಿ, ಇನ್ನೊಂದು ಕಡೆ ಯುದ್ಧ ಭೀತಿಯಿದೆ. ಒಂದು ವೇಳೆ ಕಚ್ಚಾ ತೈಲದ ಒಂದು ಬ್ಯಾರೆಲ್‌ಗೆ 150 ಡಾಲರ್ ಗಡಿ ದಾಟಿದರೆ ಹಲವು ದೇಶಗಳ ಆರ್ಥಿಕತೆ ನೆಲಕಚ್ಚುವ ಸಾಧ್ಯತೆಯಿದೆ. ಈ ಕಾರಣಕ್ಕೆ ಹೂಡಿಕೆದಾರರು ಚಿನ್ನ ಬೆಳ್ಳಿಯ ಮೇಲೆ ಹೂಡಿಕೆಗಿಂತಲೂ ಅಮೆರಿಕದ ಡಾಲರ್ ಬಾಂಡ್ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.
ಭಾರತದಲ್ಲಿ ಚಿನ್ನ, ಬೆಳ್ಳಿಯ ವ್ಯವಹಾರಗಳು ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ಆಫ್ ಇಂಡಿಯಾದಲ್ಲಿ ನಡೆಯುತ್ತಿದೆ. ಇಲ್ಲಿ ಹೂಡಿಕೆದಾರರು ಚಿನ್ನ, ಬೆಳ್ಳಿ ನೇರವಾಗಿ ಖರೀದಿ ಮಾಡದೆ ಡಿಜಿಟಲ್ ರೂಪದಲ್ಲಿ ಮುಂದೆ ದರ ಇಷ್ಟು ಏರಿಕೆಯಾಗಬಹುದು ಎಂದು ಊಹಿಸಿ ಹಣ ಹೂಡಿಕೆ ಮಾಡುತ್ತಾರೆ. ಪ್ರತಿ ತಿಂಗಳ ಐದರಂದು ಈ ಹೂಡಿಕೆ ಎಕ್ಸ್‌ಪೈರಿ ಆಗುತ್ತದೆ. ಕಳೆದ ಶುಕ್ರವಾರ(ಮಾ.20) 10 ಗ್ರಾಂ ಚಿನ್ನದ ಫ್ಯೂಚರ್ 1,44,492 ರೂ.ನಲ್ಲಿ ವ್ಯವಹಾರ ಮುಗಿಸಿತ್ತು. ಇಂದು 14,897 ರೂ.(10.3%) ಇಳಿಕೆಯಾಗಿ 1,29,595 ರೂ.ನಲ್ಲಿ ವ್ಯವಹಾರ ಮುಗಿಸಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಕುಸಿದ ಸುದ್ದಿ ಪ್ರಕಟವಾದ ಬೆನ್ನಲ್ಲೇ ಇಲ್ಲೂ ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆಯನ್ನು ಮಾರಾಟ ಮಾಡಿದ್ದಾರೆ.
ಚಿನ್ನ, ಬೆಳ್ಳಿ ಫ್ಯೂಚರ್ ದರ ಕಡಿಮೆಯಾದ ಬೆನ್ನಲ್ಲೆ ಎಂಸಿಎಕ್ಸ್ ಷೇರು ಮೌಲ್ಯ ಇಂದು ಒಂದು ದಿನ 100.10 ರೂ.(4.15%) ಇಳಿಕೆಯಾಗಿದೆ. ಶುಕ್ರವಾರ(ಮಾ.20) 2414.50 ರಲ್ಲಿ ವ್ಯವಹಾರ ಮುಗಿಸಿದ ಎಂಸಿಎಕ್ಸ್ ಒಂದು ಷೇರು ಇಂದು 2,314.40 ರೂ. ನಲ್ಲಿ ವ್ಯವಹಾರ ಮುಗಿಸಿದೆ. ಈ ಎಂಸಿಎಕ್ಸ್ ಚಿನ್ನದ ಬೆಲೆ ಭಾರತ ಆಭರಣ ಅಂಗಡಿಯಲ್ಲಿರುವ ಚಿನ್ನದ ಬೆಲೆ ಪ್ರತಿಬಿಂಬಿಸುವುದಿಲ್ಲ. ಆದರೆ MCX ಚಿನ್ನದ ಬೆಲೆಯು ಭಾರತದಲ್ಲಿ ಚಿನ್ನದ ಬೆಲೆಗಳಿಗೆ ಅತ್ಯಂತ ನಿರ್ಣಾಯಕ ಸೂಚಕಗಳಲ್ಲಿ ಒಂದಾಗಿದೆ.