ಸುದ್ದಿ ಸಂಗ್ರಹ ಕಲಬುರಗಿ
ಬರೆದಂತೆ ಬದುಕಿದ ಅಪರೂಪದ ಸಾಹಿತಿ ಡಿವಿಜಿಯವರು ಆಧುನಿಕ ಸರ್ವಜ್ಞರಾಗಿದ್ದಾರೆ. ಬರವಣಿಗೆ ಮತ್ತು ಬದುಕಿನಲ್ಲಿ ಸಾಮ್ಯತೆಯಿರುವವರು ಬೆರಳಣಿಕೆಯಷ್ಟು ಜೀವನದ ನೈಜತೆ, ಮೌಲ್ಯಗಳು, ಮೇರು ಸಂದೇಶ ಡಿವಿಜಿಯವರು ತಮ್ಮ ಅನುಭಾವದ ಸಾಹಿತ್ಯ ಮೂಲಕ ಸಾರಿದ್ದಾರೆ. ‘ಕಗ್ಗ ಕವಿ’ ಎಂದೆ ಖ್ಯಾತಿ ಪಡೆದಿರುವ ಡಿವಿಜಿಯವರು ಬಹುಮುಖ ವ್ಯಕ್ತಿತ್ವವದ ಮೇರು ಸಾಹಿತಿಯಾಗಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ ಪಾಟೀಲ ಹೇಳಿದರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ಸ್ವಾತಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಜರುಗಿದ ಕನ್ನಡದ ಮೇರು ಸಾಹಿತಿಗಳಾದ ‘ಡಾ.ಡಿ.ವಿ ಗುಂಡಪ್ಪ ಮತ್ತು ಪು.ತಿ ನರಸಿಂಹಚಾರ್ಯರ ಜನ್ಮದಿನಾಚರಣೆ’ ಕಾರ್ಯಕ್ರಮದಲ್ಲಿ ಉಭಯ ಮಹನೀಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಡಿವಿಜಿಯವರು ಸಂಸ್ಕೃತ, ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಅಸಾಧಾರಣ ಪಾಂಡಿತ್ಯ ಗಳಿಸಿದ್ದರು. ಸಾಹಿತ್ಯ, ರಾಜಕೀಯ, ಪತ್ರಿಕೋದ್ಯಮ ಮತ್ತು ಸಾಮಾಜಿಕ ಕೇತ್ರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಏಳು ದಶಕಗಳಷ್ಟು ಸುಧೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ಪು.ತಿ ನರಸಿಂಹಚಾರ್ಯರು ಭಾವಗೀತೆ, ಗೀತನಾಟಕ, ಭಾವನಾಚಿತ್ರ, ರಸಚಿತ್ರ, ಸಂಗೀತರೂಪಕ, ಪ್ರಬಂಧ, ವಿಚಾರ ಸಾಹಿತ್ಯ, ಸಣ್ಣಕಥೆ, ಗದ್ಯನಾಟಕ, ಮಹಾಕಾವ್ಯ ಸೇರಿದಂತೆ ಹತ್ತು ಹಲವು ಪ್ರಕಾರದಲ್ಲಿ ಸಾಹಿತ್ಯ ಕೃಷಿ ಮಾಡುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದರು.
ಬಳಗದ ಗೌರವ ಸಲಹೆಗಾರ ಹಾಗೂ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್ ಬಿರಾದಾರ ಮಾತನಾಡಿ, ಕನ್ನಡ ಸಾರಸತ್ವ ಲೋಕದ ಚಿರಕೃತಿ ಎಂದರೆ ‘ಮಂಕುತಿಮ್ಮನ ಕಗ್ಗ’ವಾಗಿದೆ. ಈ ಗ್ರಂಥದ ಬಗ್ಗೆ ಕನ್ನಡಿಗರಿಗೆಲ್ಲ ಅಪಾರವಾದ ತುಂಬು ಹೃದಯದ ಅಭಿಮಾನವಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸಾಲಿ ಸಂಗೀತಾ, ಶಿಕ್ಷಕಿಯರಾದ ಕಾಶಮ್ಮ ಚಿನಮಳ್ಳಿ, ಚಂದ್ರಲೇಖಾ ಪೂರ್ಮಕರ್, ಪ್ರೀತಿ, ಶಿಲ್ಪಾ, ವರ್ಷಾರಾಣಿ ಪಾಟೀಲ, ಪ್ರೀತಿ ಎಂ, ಪ್ರಿಯಾಂಕಾ, ಸೇವಕಿ ಸುನಿತಾ, ವಿದ್ಯಾರ್ಥಿ ಪ್ರತಿನಿಧಿಗಳಾದ ಆದಿತ್ಯ, ಅದಿತಿ ಮತ್ತು ಆರಾಧ್ಯ ಸೇರಿದಂತೆ ಅನೇಕರು ಇದ್ದರು.