ಸುದ್ದಿ ಸಂಗ್ರಹ ಚಿತ್ತಾಪುರ
ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿ, ಪುರುಷರ ಸಮಾನಾಗಿ ನಿಂತಿದ್ದಾರೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ಅಂಬಿಗರ ಚೌಡಯ್ಯ ಭವನದಲ್ಲಿ ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಮತ್ತು “ಕಾನೂನು ಅರಿವು” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಪಂಚದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಲಾಗಿದ್ದು, ಅದನ್ನು ಪರಿಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮಹಿಳೆಯರು ಭೂಮಿಯಿಂದ ಬಾಹ್ಯಾಕಾಶದವರೆಗೆ ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ, ಸರಕಾರ ನೀಡುವ ವಿಶೇಷ ಸ್ಥಾನಮಾನಗಳ ಸದುಪಯೋಗ ಪಡಿಸಿಕೊಂಡು ಮತ್ತಷ್ಟು ಸಾಧನೆ ಮಾಡಬೇಕು ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರತಿ ತುಪ್ಪದ್ ಮಾತನಾಡಿ, ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳಿಗೆ ಸರಕಾರ ನೀಡುತ್ತಿರುವ ಎಲ್ಲಾ ಯೋಜನೆಗಳು ವರ್ಷಪೂರ್ತಿ ಮನೆ ಮನೆಗೆ ತಲುಪಿಸಿ ಗರ್ಭಿಣಿ, ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಉತ್ತಮ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಇಂತಹ ಉತ್ತಮ ಕಾರ್ಯ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಗುರುತಿಸಿ ಪ್ರೋತ್ಸಾಹದಾಯಕವಾಗಿ ಅವರಿಗೆ ಪ್ರಶಸ್ತಿ ನೀಡಿ, ಮುಂಬರುವ ದಿನಗಳಲ್ಲೂ ಇಂತಹ ಕಾರ್ಯಕ್ರಮಗಳು ಮಾಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಎಂದು ಕಿವಿಮಾತು ಹೇಳಿದರು.
ನ್ಯಾಯವಾದಿ ಶರಣಮ್ಮ ಮಾತನಾಡಿ, ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಕೀಳಾಗಿ ಕಾಣುವ ಮನಸ್ಥಿತಿ ಜೀವಂತವಿದೆ, ಹುಟ್ಟುವ ಮಗು ಹೆಣ್ಣು ಎಂದು ಗೊತ್ತಾದರೆ ತಾಯಿಯ ಗರ್ಭದಲ್ಲೆ ಭ್ರೂಣ ಹತ್ಯೆ ಮಾಡುವಂತಹ ಕಟುಕ ಮನಸ್ಥಿತಿಯ ಜನರು ಇರುವುದು ಬೇಸರದ ಸಂಗತಿ ಎಂದರು.
ಸಾಧಕರಿಗೆ ಪ್ರಶಸ್ತಿ ಪ್ರದಾನ
ಉತ್ತಮ ಸೇವೆ ಸಲ್ಲಿಸಿದ ಉಮಾದೇವಿ ಚೆಂಗಟಿ, ರೇಖಾ ಕುಲಕರ್ಣಿ, ಕರುಣಾ ಮತ್ತು ಕವಿತಾ ಸೇರಿದಂತೆ ಒಟು 10 ಜನ ಕಾರ್ಯಕರ್ತೆಯರಿಗೆ ಮತ್ತು ಈರಮ್ಮ, ಗಂಗಮ್ಮ ಸೇರಿದಂತೆ 10 ಜನ ಸಹಾಯಕಿಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಪಿಎಂಎಂವೈ ಸಾಧಕಿ ಪ್ರೇಮಾ ಮತ್ತು ಪೋಷಣಾ ಯೋಜನೆಯ ಜಯಶ್ರೀ ಗುಂಡಗುರ್ತಿ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಸೋಮಶೇಖರ್ ದಿಗ್ಗಾಂವ, ಸಹಾಯಕ ಸರ್ಕಾರಿ ಅಭಿಯೋಜಕಿ ಅಂಜನಾದೇವಿ ಆರ್, ಆರೋಗ್ಯ ಇಲಾಖೆಯ ಶಾಂತಯ್ಯ ಸ್ವಾಮಿ, ತಾಲೂಕು ಪಂಚಾಯತಿಯ ನಾಗರಾಜ್ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಮತ್ತು ವಕೀಲರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಲಯ ಮೇಲ್ವಿಚಾರಕಿ ಕವಿತಾ ಪಾಟೀಲ್ ನಿರುಪಿಸಿ, ವಂದಿಸಿದರು.